ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಹಳೇ ಮೈಸೂರು ಭಾಗದಲ್ಲಿ ತಮ್ಮ ತಮ್ಮ ಪ್ರಾಬಲ್ಯ ಸಾಧಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪೈಪೋಟಿಗೆ ಬಿದ್ದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಭದ್ರಕೋಟೆಗಳಾದ ಮಂಡ್ಯ ಮತ್ತು ರಾಮನಗರದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ತಮ್ಮನ್ನು ತಾವು ಪ್ರಬಲ ಸಮುದಾಯದ ನಾಯಕ ಎಂದು ಸಾಬೀತುಪಡಿಸಲು ಕುಮಾರಸ್ವಾಮಿ ಅವರು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶಿವಕುಮಾರ್ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿರುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಮತ್ತು ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗಬಹುದು ಎಂದು ಕುಮಾರಸ್ವಾಮಿ ಭಾನುವಾರ ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಎಚ್.ಡಿಕೆ ಹೇಳಿಕೆ ನಂತರ ಹಲವಾರು ಒಕ್ಕಲಿಗ ಸಮುದಾಯದ ಮುಖಂಡರು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ರಾಜ್ಯದ ಮಾಜಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಕುಮಾರಸ್ವಾಮಿಯವರು ಸರ್ಕಾರ ಪತನವಾಗುತ್ತದೆ ಮತ್ತು ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂಬಂತಹ ಹೇಳಿಕೆಗಳನ್ನು ನೀಡುವುದು ಅವರ ಸ್ಥಾನಮಾನಕ್ಕೆ ತಕ್ಕುದಲ್ಲ. ಶಿವಕುಮಾರ್ ಅವರು ಡಿಸಿಎಂ, ಕೆಪಿಸಿಸಿ ಅಧ್ಯಕ್ಷರು ಮತ್ತು ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರು ಎಂಬುದನ್ನು ಕುಮಾರಸ್ವಾಮಿ ಗಮನದಲ್ಲಿರಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಶಿವಕುಮಾರ್ ಪ್ರಬಲವಾಗಿ ಬೆಳೆಯುತ್ತಿರುವುದರಿಂದ ಒಕ್ಕಲಿಗ ಸಮುದಾಯದಲ್ಲಿ ತಮ್ಮ ವರ್ಚಸ್ಸು ಕಡಿಮೆಯಾಗುತ್ತಿದೆ ಎಂಬ ಭಾವನೆಯಿಂದ ಕುಮಾರಸ್ವಾಮಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿರಬಹುದು ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಡಿ.ಕೆ ಸುರೇಶ್ ಸೋಲಿಸಲು ತಂತ್ರ: ವೈರತ್ವ ಮರೆತು ಕುಮಾರಸ್ವಾಮಿ-ಯೋಗೇಶ್ವರ್ ಒಗ್ಗಟ್ಟಿನ ಮಂತ್ರ; ಗೌಡರ ಜೊತೆ ಸಿಎಂ ಚರ್ಚೆ
ಇನ್ನೂ ಡಿ.ಕೆ ಶಿವಕುಮಾರ್ ಅವರ ಕಿರಿಯ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡರು, ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷವನ್ನು ತೊರೆಯದಂತೆ ನೋಡಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಕಷ್ಟವಾಗುತ್ತಿದೆ ಹೀಗಾಗಿ ಇಂತಹ ತಂತ್ರ ಅನುಸರಿಸುತ್ತಿದ್ದಾರೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವಂತೆ ಕುಮಾರಸ್ವಾಮಿ ಮನವಿ ಮಾಡಿರಬಹುದು. ಕಾಲವೇ ಉತ್ತರ ನೀಡುವುದರಿಂದ ಅದು ಅವರ ಕನಸಾಗಿ ಉಳಿಯುತ್ತದೆ. ಸಮಯ ಬಂದಾಗ ನಾವೂ ಕೂಡ ಕುಮಾರಸ್ವಾಮಿಯವರನ್ನು ಬಯಲಿಗೆಳೆಯುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗೆ ಇಲ್ವಲ್ಲಾ; ನಿಮ್ಮದು ಉತ್ತರ ಕುಮಾರನ ಪೌರುಷ: ಡಿಸಿಎಂ ಕಾಲೆಳೆದ ಜಿಟಿ ದೇವೇಗೌಡ
ಕುಮಾರಣ್ಣ ಹಿಂದೆ ಏನು ಮಾಡಿದ್ದರು, ಮುಂದೆ ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ತಮ್ಮ ಹೇಳಿಕೆ ಮೂಲಕ ತಿಳಿಸಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಪ್ಲಾನ್ ಏನಿದೆ ಎಂಬುದನ್ನು ಹೇಳಿದ್ದಾರೆ. ಅವರು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಹೇಳಿದ್ದಾರೆ. ಮುಂದೆ ಏನು ಮಾಡಬೇಕು ಅಂದುಕೊಂಡಿದ್ದಾರೋ ಅದನ್ನು ಹೇಳಿದ್ದಾರೆ. ಈ ವಿಚಾರವಾಗಿ ಮುಂದೆ ಮಾತನಾಡೋಣ, ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರು ತಮ್ಮ ತಂಗಿ, ಸಹೋದರ ಹಾಗೂ ನನ್ನ ಹೆಂಡತಿ ಮೇಲೆ ಕೇಸ್ ಹಾಕಿಸಿದ್ದರು ಎಂದು ಹೇಳಿದ್ದಾರೆ.