ರಾಜಕೀಯ

ನಮಗೆ ಈವರೆಗೂ ಹೈಕಮಾಂಡ್ ನಯಾ ಪೈಸೆ ಹಣವನ್ನು ಕೇಳಿಲ್ಲ, ಬಿಜೆಪಿ ನಾಯಕರ ಆರೋಪ ಆಧಾರರಹಿತ: ಸಿಎಂ ಸಿದ್ದರಾಮಯ್ಯ

Sumana Upadhyaya

ಮೈಸೂರು: ಮುಂಬರುವ ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ಸಂಗ್ರಹ ಮಾಡಿ ಕೊಡಲಾಗುತ್ತಿದೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಐಟಿ ಇಲಾಖೆ ದಾಳಿ ವೇಳೆ ಸಿಕ್ಕಿದ ಹಣ ಚುನಾವಣೆ ವೆಚ್ಚಕ್ಕೆ ನೀಡಲಾಗಿದ್ದು, ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್ ಆದೇಶ ಮೇರೆಗೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.

ಇದಕ್ಕೆ ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ನಮಗೆ ಈವರೆಗೂ ಹೈಕಮಾಂಡ್ ನಯಾ ಪೈಸೆ ಹಣವನ್ನು ಕೇಳಿಲ್ಲ. ಬಿಜೆಪಿ ನಾಯಕರು ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದರು.

ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತವಾಗಿದ್ದು, ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ. ಗುತ್ತಿಗೆದಾರನನ್ನು ಬಿಜೆಪಿ, ಕಾಂಗ್ರೆಸ್ ಗುತ್ತಿಗೆದಾರ ಎಂದು ಹೇಳೋದಕ್ಕೆ ಆಗುತ್ತಾ? ಅವನು ಬಿಜೆಪಿ ಗುತ್ತಿಗೆದಾರ ಅಂಥ ಈಗ ನಾನು ಹೇಳುತ್ತೇನೆ. ಅದನ್ನು ಯಾರಾದರೂ ಒಪ್ಪಿಕೊಳ್ಳುತ್ತಾರಾ. 5 ರಾಜ್ಯಗಳ ಚುನಾವಣೆಗೂ ನಮಗೂ ಏನು ಸಂಬಂಧವಿದೆ, ನಾವೇನಾದರೂ ನಮ್ಮ ಚುನಾವಣೆಗೆ ಬೇರೆ ಯಾರ ಬಳಿಗಾದರೂ ಹೋಗಿ ಯಾರಾನ್ನಾದರೂ ಹಣ ಕೇಳಿದ್ದೀವಾ ಎಂದು ಕೇಳಿದರು.

ಈಗ ಅವರಿಗೆ ಕೊಡಬೇಕು, ಇವರಿಗೆ ಕೊಡಬೇಕು ಎನ್ನುವ ಪ್ರಶ್ನೆಯಲ್ಲಿ ಅರ್ಥವೇ ಇಲ್ಲ. ಬಿಜೆಪಿಯವರು ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಾರೆ. ಇದು ಸರ್ಕಾರದ ದುಡ್ಡು ಅಂಥಾ ಐಟಿ ಏನಾದರೂ ಹೇಳಿದ್ಯಾ, ಐಟಿ ಏನಾದರೂ ಸರ್ಕಾರದ ಮೇಲೆ ಆರೋಪ ಮಾಡಿದ್ಯಾ, ಇದರ ಬಗ್ಗೆ ನಾವೇಕೆ ತನಿಖೆ ಮಾಡಬೇಕು. ಐಟಿ ದಾಳಿಗಳು ಸಾಮಾನ್ಯವಾಗಿ ನಡೆಯುತ್ತವೆ. ಈ ದಾಳಿ ಕೂಡ ಅದರ ಒಂದು ಭಾಗ ಅಷ್ಟೇ. ಇದನ್ನು ರಾಜಕೀಯಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಅಷ್ಟೇ ಎಂದರು.

ಕಾಂಗ್ರೆಸ್ ನಾಯಕರಿಗೆ ದುಡ್ಡು ಸಂಗ್ರಹಿಸುವ ಗುರಿ ನೀಡಿರುವುದಾಗಿ ಬಿಜೆಪಿಯ ಸಿ.ಟಿ.ರವಿಯವರು ಮಾಡಿರುವ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ.ರವಿಯವರ ಹೇಳಿಕೆಗಳು ಸದಾ ಸುಳ್ಳಿನಿಂದ ಕೂಡಿರುತ್ತದೆ. ಅವರ ಸುಳ್ಳು ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಈ ರೀತಿಯ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದರು.

ಕುಡಿಯುವ ನೀರಿಗೆ ಸಮಸ್ಯೆಯಿಲ್ಲ: ರಾಜ್ಯದಲ್ಲಿ ಕುಡಿಯುವ ‌ನೀರು, ಮೇವಿನ ಕೊರತೆ, ನಿರುದ್ಯೋಗ ಸಮಸ್ಯೆ ‌ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿವೆ. 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಸದ್ಯಕ್ಕೆ ಕುಡಿಯುವ ನೀರಿ‌ನ ಸಮಸ್ಯೆಯಿಲ್ಲ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಹೊಸದಾಗಿ ಬೋರ್ ವೆಲ್ ಗಳನ್ನು ಕೊರೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

SCROLL FOR NEXT