ರಾಜಕೀಯ

ಬೆಳಗಾವಿಯಲ್ಲಿ ಡಿಕೆಶಿ ರಾಜಕೀಯ ಹಸ್ತಕ್ಷೇಪಕ್ಕೆ ಬೇಸರ; ಸತೀಶ್ ಜಾರಕಿಹೊಳಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್!

Shilpa D

ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತ 20 ಶಾಸಕರನ್ನ ಮೈಸೂರಿಗೆ ಕರೆದೊಯ್ದು ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದ ಪ್ಲ್ಯಾನ್ ಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ.

ರಾಜ್ಯ ಸರ್ಕಾರದಲ್ಲಿ ಮತ್ತೊಂದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಆಗ್ರಹ ಮಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತ ಶಾಸಕರೊಂದಿಗೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು,ಆದರೆ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕಿದೆ.

ಶಕ್ತಿ ಪ್ರದರ್ಶನದ ಭಾಗವಾಗಿ ತಮ್ಮ ಆಪ್ತ ವಲಯದ 20ಕ್ಕೂ ಹೆಚ್ಚು ಶಾಸಕರೊಂದಿಗೆ ವಿಶ್ವ ವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ತೆರಳಲು ಸಿದ್ಧತೆ ನಡೆಸಿದ್ದರು. ಶಾಸಕರನ್ನು ಕರೆದುಕೊಂಡು ಹೋಗಲು ಬಸ್ ಕೂಡಾ ಸಿದ್ದವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಹೈಕಮಾಂಡ್, ಸತೀಶ್ ಜಾರಕಿಹೊಳಿ ಅವರ ನಡೆಗೆ ತಡೆ ಒಡ್ಡಿದೆ., ಗುಂಪಾಗಿ ಹೋಗದಂತೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.

ಇದು ತಪ್ಪು ಸಂದೇಶವನ್ನು ಕಳುಹಿಸುತ್ತದೆ ಮತ್ತು ವಿರೋಧ ಪಕ್ಷಗಳು ಅದನ್ನು ಸಮಸ್ಯೆಯನ್ನಾಗಿ  ಪರಿವರ್ತಿಸುತ್ತಾರೆ ಎಂಬುದನ್ನು ಮನಗಂಡ ಹೈಕಮಾಂಡ್  ಸತೀಶ್ ಯೋಜನೆಗೆ ಬ್ರೇಕ್ ಹಾಕಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಧ್ಯಸ್ಥಿಕೆಯಿಂದ ಸತೀಶ್ ಅವರ ಪ್ಲ್ಯಾನ್ ರದ್ದುಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ಧಾರವಾಡ ಮತ್ತು ಬೆಳಗಾವಿಯ ಶಾಸಕರು ಬೆಳಗ್ಗೆ ಜಾರಕಿಹೊಳಿ ಅವರ ನಿವಾಸದಲ್ಲಿ ಮೊಕ್ಕಾಂ ಹೂಡಿದ್ದು, ಬಸ್‌ನಲ್ಲಿ ಮೈಸೂರಿಗೆ ತೆರಳಿ, ಅಲ್ಲಿ ಸಮಾಲೋಚನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಯೋಜಿಸಿದ್ದರು.

ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆ ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರಿಂದ ಸತೀಶ್ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಘಟಕದ ಪುನರ್‌ಸಂಘಟನೆ ಹಾಗೂ ಕಾರ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಪಕ್ಷ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಅವರ ಅಸಮಾಧಾನಕ್ಕೆ ಒಂದು ಕಾರಣ ಎಂದು ತಿಳಿದು ಬಂದಿದೆ. ಸಚಿವರಾಗಿ ಸತೀಶ್ ಅವರನ್ನು ಬದಲಿಸುವ ಸಾಧ್ಯತೆ ಇರುವುದರಿಂದ ತಮ್ಮ ನಂಬಿಕಸ್ಥ ವ್ಯಕ್ತಿ ಉತ್ತರಾಧಿಕಾರಿಯಾಗಬೇಕೆಂದು ಬಯಸಿದ್ದಾರೆ.

SCROLL FOR NEXT