ರಾಜಕೀಯ

ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ, ನಮ್ಮಲ್ಲಿ ಯಾರ ಬಗ್ಗೆಯೂ ಮುನಿಸಿಲ್ಲ, ಎಲ್ಲಾ ಶಾಸಕರು ನಮ್ಮವರೇ: ಡಿ ಕೆ ಶಿವಕುಮಾರ್

Sumana Upadhyaya

ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬೆಳಗಾವಿ ಜಿಲ್ಲೆ ಭೇಟಿ ನೀಡಿದ್ದು, ಅವರನ್ನು ಸ್ವಾಗತಿಸಲು ಪ್ರಮುಖ ಶಾಸಕರು, ಸಚಿವರು ವಿಮಾನನಿಲ್ದಾಣಕ್ಕೆ ಆಗಮಿಸದೇ ಇದ್ದಿದ್ದು ಹಲವು ಕುತೂಹಲಗಳನ್ನು ಕೆರಳಿಸಿದೆ. ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಪಕ್ಷದ ಬಹುತೇಕ ಶಾಸಕರು ಮತ್ತು ಎಂಎಲ್‌ಸಿಗಳು ಶಿವಕುಮಾರ್ ಅವರನ್ನು ಸ್ವಾಗತಿಸಲು ಬರಲಿಲ್ಲ. 

ಪಕ್ಷ ಮತ್ತು ವಿರೋಧಿಗಳಿಗೆ ಬಲವಾದ ಸಂದೇಶವನ್ನು ರವಾನಿಸಲು, ಜಾರಕಿಹೊಳಿ ಅವರು ಪಕ್ಷದ ಅನೇಕ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಶಕ್ತಿ ಪ್ರದರ್ಶನದಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಮಧ್ಯೆ ಡಿ ಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದು ಕೂಡ ಸುದ್ದಿಯಾಗುತ್ತಿದೆ.

ಈ ಬಗ್ಗೆ ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ. ಆಂತರಿಕವಾಗಿಯೂ ಇಲ್ಲ, ಬಹಿರಂಗವಾಗಿಯೂ ಇಲ್ಲ. ನನಗೆ ಯಾಕೆ ಭಿನ್ನಾಭಿಪ್ರಾಯ ಇರಬೇಕು ಎಂದು ಕೇಳಿದರು.

ನಮ್ಮ ನಡುವೆ ಯಾವುದೇ ಬಿರುಕಿಲ್ಲ. ನನ್ನನ್ನು ಸ್ವಾಗತಿಸಲು ಬರಲಿಲ್ಲ, ಅದು ಇದು, ಎಂದು ನೀವೇ ಏನೇನೋ ಹೇಳುತ್ತೀರಿ? ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಮ್ಮಲ್ಲಿ ಯಾರ ಬಗ್ಗೆಯೂ ಮುನಿಸಿಲ್ಲ. ಎಲ್ಲಾ ಶಾಸಕರು ನಮ್ಮವರೇ. ನಿಮಗೂ ಹಾಗೂ ಬಿಜೆಪಿಯವರಿಗೆ ಒಂದು ಸುದ್ದಿ ಬೇಕು, ಅದಕ್ಕೆ ಹೀಗೆಲ್ಲಾ ಹೇಳುತ್ತೀರಿ ಎಂದರು.

ಸತೀಶ್ ಅವರು ಶಾಸಕರ ಜೊತೆ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ನಾವಿಬ್ಬರೂ ಚರ್ಚಿಸಿದೆವು. ಬೆಳಗಾವಿಯಿಂದಲೇ ಕಾಂಗ್ರೆಸ್ ಬಂಡಾಯ ಆರಂಭ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಕೇಳಿದಾಗ ಜೆ.ಎಚ್. ಪಟೇಲರ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರು ಒಂದು ಭಾಷಣ ಮಾಡಿದ್ದರು. ಹೋರಿ ಮತ್ತು ನಾಯಿ ಕತೆ. ಅದನ್ನು ನೀವು ಕೇಳಿದ್ದೀರಾ? ಅದನ್ನು ಬಿಜೆಪಿಯವರಿಗೆ ಕೇಳಿಸಿಕೊಳ್ಳಲು ಹೇಳಿ ಎಂದು ತಿರುಗೇಟು ನೀಡಿದರು.

ಒಂದು ದಿನ ಮಳೆ ಆಗದಿದ್ದರೆ ಸರ್ಕಾರಕ್ಕೆ 1 ಸಾವಿರ ಕೋಟಿ ನಷ್ಟ:ಈ ವರ್ಷ ರಾಜ್ಯದಲ್ಲಿ ಮಳೆ ಅಭಾವ ಆಗಿದೆ ಎಂದು ಹೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್, ಒಂದು ದಿನ ಮಳೆ ಆಗದಿದ್ದರೆ ಸರ್ಕಾರಕ್ಕೆ 1 ಸಾವಿರ ಕೋಟಿ ರೂ. ನಷ್ಟವಾಗುತ್ತದೆ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಮುತುವರ್ಜಿ ವಹಿಸಿದೆ. ಸಚಿವ ಕೆ.ಜೆ.ಜಾರ್ಜ್​ ಜೊತೆಗೆ ಪಾವಗಡಕ್ಕೆ ಹೋಗಿ ವಿವರಣೆ ನೀಡಿದ್ದೇವೆ. ಮೊದಲು ರೈತರಿಗೆ 6 ಗಂಟೆ ವಿದ್ಯುತ್ ವಿತರಣೆ ‌ಮಾಡಲಾಗುತ್ತಿತ್ತು. ಸಿಎಂ ಜೊತೆ ಚರ್ಚಿಸಿ ನಮ್ಮ ಸರ್ಕಾರ 7 ಗಂಟೆ ವಿದ್ಯುತ್ ‌ನೀಡುತ್ತಿತ್ತು. ಈಗ ರೈತರಿಗೆ ಸ್ವಲ್ಪ ಕಷ್ಟವಾಗುತ್ತಿದೆ. ನೀರು ಕಳ್ಳತನ ‌ಆಗುತ್ತಿರುವುದಕ್ಕೆ ಸರ್ಕಾರಕ್ಕೆ ದೊಡ್ಡ ಭಾರ ಆಗುತ್ತಿದೆ. ಮೈಸೂರು ಭಾಗದ ಜನರನ್ನು ದೇವರೇ ಕಾಪಾಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮೇಲೆ ನೋಡಿ ಕೈಸನ್ನೆ ಮಾಡಿದ ಡಿಕೆಶಿ: ಇಂದು ಅವರ ವಿರುದ್ಧ  ಅಕ್ರಮ ಆಸ್ತಿ ಗಳಿಕೆ ಪ್ರಕರಣದ‌ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪು ನೀಡಿದ್ದು ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿ ಆದೇಶ ಹೊರಡಿಸುವ ಮುನ್ನ ಬೆಳಗಾವಿಯಲ್ಲಿ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಡಿಕೆಶಿ, ತಲೆಯಿಂದ ಹಣೆ ಮುಟ್ಟಿ ಮೇಲೆ ನೋಡಿ ಕೈಸನ್ನೆ ಮಾಡಿದರು. 

ಆ ಬಗ್ಗೆ ನನಗೆ ಗೊತ್ತಿಲ್ಲ, ಎಫ್ಐಆರ್ ಲ್ಲಿ ಲೋಪವಿದೆ, ತನಿಖೆ ಮಾಡಬಾರದು ಎಂದು ಅರ್ಜಿ ಹಾಕುತ್ತಿದ್ದಾರೆ, ನನಗೆ ಅರ್ಜಿಯಲ್ಲಿ ಏನಿದೆ ಗೊತ್ತಿಲ್ಲ, ನಮ್ಮ ವಕೀಲರು ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

SCROLL FOR NEXT