ರಾಜಕೀಯ

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಕುರಿತು ಹೈಕಮಾಂಡ್ ನಿರ್ಧರಿಸಲಿದೆ: ಸಂಸದ ಪ್ರತಾಪ್ ಸಿಂಹ

Ramyashree GN

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂಬ ಊಹಾಪೋಹಗಳ ನಡುವೆ, ಲೋಕಸಭೆ ಸಂಸದ ಪ್ರತಾಪ್ ಸಿಂಹ ಅವರು ಸೋಮವಾರ, ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಪಕ್ಷದ ಉನ್ನತ ನಾಯಕರ ಮೇಲಿದೆ ಎಂದು ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕರ್ನಾಟಕದಲ್ಲಿ ನಮ್ಮ ಮುಂದಿನ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಳ್ಳಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಬೇಕು. ಈ ಬಗ್ಗೆ ಹೈಕಮಾಂಡ್ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನಿನ್ನೂ ಪಕ್ಷದ ಕಿರಿಯ ಸದಸ್ಯನಾಗಿದ್ದೇನೆ ಮತ್ತು ಈ ವಿಷಯಗಳ ಬಗ್ಗೆ ಮಾತನಾಡಲು ಸರಿಯಲ್ಲ. ತಾವು ಕೇವಲ 10 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ' ಎಂದರು.

ಫೈರ್‌ಬ್ರಾಂಡ್ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಪಕ್ಷದ ರಾಜ್ಯ ಘಟಕದ ಉಸ್ತುವಾರಿ ವಹಿಸಬೇಕೆಂದು ಪಕ್ಷದ ಕಾರ್ಯಕರ್ತರ ಒಂದು ವರ್ಗ ಬಯಸುತ್ತದೆ ಎಂದು ಹೇಳಿದ ಸಿಂಹ, ಕರ್ನಾಟಕದಲ್ಲಿ ನಮ್ಮ ಮುಂದಿನ ಅಧ್ಯಕ್ಷರ ನೇಮಕದ ಬಗ್ಗೆ ನಾನು ಹೆಚ್ಚು ಹೇಳಲಾರೆ. ಆದರೆ, ನಮ್ಮ ಪಕ್ಷದ ಒಂದು ವರ್ಗದ ಕಾರ್ಯಕರ್ತರು ಶೋಭಾ ಕರಂದ್ಲಾಜೆ ಅವರು ರಾಜ್ಯಾಧ್ಯಕ್ಷರ ಹುದ್ದೆಗೆ ಬರಬೇಕೆಂದು ಬಯಸುತ್ತಿದ್ದಾರೆ. ವೈಯಕ್ತಿಕವಾಗಿ, ಶೋಭಾ-ಜಿ ಅವರನ್ನು ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಪ್ರಧಾನಿ ಮೋದಿ ಹೆಸರಿನಲ್ಲಿ ಸ್ಪರ್ಧಿಸಲಿದೆ. ಪ್ರಧಾನಿ ಮೋದಿ ಹೆಸರಿನಲ್ಲಿ ನಾವು ಗೆಲ್ಲುತ್ತೇವೆ. ಅವರು ನಮ್ಮ ದೇವರು, ಆದರೆ, ಮುಂದಿನ ಲೋಕಸಭಾ ಚುನಾವಣೆಗೂ ಮತ್ತು ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೂ ಯಾರೂ ಸಂಬಂಧ ಕಲ್ಪಿಸಬಾರದು' ಎಂದರು.

SCROLL FOR NEXT