ಕಲಬುರಗಿ: ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೋ) ಭೂಮಿ ಮಂಜೂರು ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಅಂದು ಕಾಂಗ್ರೆಸ್ ಪಕ್ಷ ಬಿತ್ತಿ ಬೆಳೆದ ಮರದ ಹಣ್ಣುಗಳನ್ನು ಇಂದು ಬಿಜೆಪಿ ತಿನ್ನುತ್ತಿದೆ ಎಂದು ಹೇಳಿದರು. ಕಲಬುರಗಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ವೈಜ್ಞಾನಿಕ ತಳಹದಿಯ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ದೃಢವಾದ ನಂಬಿಕೆ ಇದೆ. ಕುರುಡು ನಂಬಿಕೆಗಳೊಂದಿಗೆ ಹೋಗಲು ನಾವು ಬಿಜೆಪಿಯಂತಲ್ಲ ಎಂದು ಹೇಳಿದರು.
ಚಂದ್ರಯಾನ-3 ಮಿಷನ್‌ಗಾಗಿ ಕೆಲಸ ಮಾಡಿದ ವಿಜ್ಞಾನಿಗಳು ಹಿಂದುಳಿದ ವರ್ಗಗಳಿಗೆ ಸೇರಿದವರು. ಆದರೆ, ಅಧಿಕಾರಕ್ಕೆ ಬಂದರೆ ಕೆಲವೇ ಕೆಲವು ಸಮುದಾಯಗಳು ಖುಷಿ ಪಡುತ್ತಿವೆ. ಎಲ್ಲ ಸಮುದಾಯದವರಿಗೂ ಅವಕಾಶ ಸಿಗಲಿ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯ 'ಒಂದು ರಾಷ್ಟ್ರ ಒಂದು ಚುನಾವಣೆ' ಘೋಷಣೆ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಕೇಸರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಹೇಳಿಕೆಗಳಿಗೆ ಕೊರತೆಯಿಲ್ಲ. ಅವರು ದೇಶದ ವೈವಿಧ್ಯತೆಯನ್ನು ನಾಶಪಡಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಬಿಜೆಪಿ ಒಂದು ರಾಷ್ಟ್ರ, ಒಂದು ನಾಯಕ ಎಂಬ ಘೋಷಣೆಯೊಂದಿಗೆ ಹೊರಬೀಳಬಹುದು. ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸದೆ ಚುನಾವಣೆ ನಡೆಸುವ ಅವಶ್ಯಕತೆಯಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಸಂಪುಟದಿಂದ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಮಾತನಾಡಿದ ಹರಿಪ್ರಸಾದ್, ತಾವು ನಿಷ್ಠಾವಂತ ಕಾಂಗ್ರೆಸ್ಸಿಗ. ನನ್ನ ಪ್ರತಿಭಟನೆ ಸಚಿವ ಸ್ಥಾನ ಕೇಳಲು ಅಲ್ಲ. ಸಣ್ಣ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವಿಚಾರವಾಗಿ ಬೀದಿಗಿಳಿಯಲು ನಾನು ಸಿದ್ಧ. ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರಿಂದ ಜನರು ಕಲಿಯಬೇಕು. ಪ್ಯೂನ್‌ನಿಂದ ಉನ್ನತ ಹುದ್ದೆಗಳವರೆಗೆ, ಒಂದು ಸಮುದಾಯಕ್ಕೆ ಸೇರಿದ ನೌಕರರು ಮತ್ತು ಅಧಿಕಾರಿಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲ, ಎಲ್ಲಾ ವರ್ಗದ ಜನರಿಗೆ ಅವಕಾಶಗಳನ್ನು ನೀಡಬೇಕು ಎಂದು ಹರಿಪ್ರಸಾದ್ ಹೇಳಿದರು.