ರಾಜಕೀಯ

ಕಮಲ-ದಳ ಮೈತ್ರಿ ಲೆಕ್ಕಾಚಾರ: ಪಕ್ಷದೊಳಗೆ ಅಪಸ್ವರ; ಕಲ್ಯಾಣ ಕರ್ನಾಟಕದ ಇಬ್ಬರು ಜೆಡಿಎಸ್ ಶಾಸಕರು ಆಕ್ಷೇಪ

Ramyashree GN

ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತವನ್ನು ವಿರೋಧಿಸಲು ಸೀಟು ಹಂಟಿಕೆ ಆಧಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿರುವ ಪಕ್ಷದ ನಡೆಗೆ ಕಲ್ಯಾಣ ಕರ್ನಾಟಕ ಭಾಗದ ಇಬ್ಬರು ಜೆಡಿಎಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುರುಮಿಠಕಲ್ ಶಾಸಕ ಶರಣಗೌಡ ಪಾಟೀಲ್ ಕಂದಕೂರ ಹಾಗೂ ದೇವದುರ್ಗದ ಶಾಸಕಿ ಕರಿಯಮ್ಮ ಅವರು ಮೈತ್ರಿ ಮಾಡಿಕೊಳ್ಳುವ ಪಕ್ಷದ ಮುಖಂಡರ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಳು ಜಿಲ್ಲೆಗಳು ಮತ್ತು 41 ಕ್ಷೇತ್ರಗಳನ್ನು ಒಳಗೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶದಿಂದ ಆಯ್ಕೆಯಾಗಿರುವ ಜೆಡಿಎಸ್ ಶಾಸಕರೆಂದರೆ ಕಂದಕೂರು ಮತ್ತು ಕರಿಯಮ್ಮ ಮಾತ್ರ.

ಯಾದಗಿರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪಾಟೀಲ್, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಪಕ್ಷವು ಹೋರಾಡಿದ್ದು, ಜನರು ಆಶೀರ್ವಾದ ಮಾಡಿದ್ದಾರೆ. 'ಈಗ ನನ್ನ ಕ್ಷೇತ್ರದ ಮತದಾರರಿಗೆ ನಾನು ಯಾವ ಉತ್ತರವನ್ನು ನೀಡಬೇಕು?' ಎಂದಿದ್ದಾರೆ.

'ಒಂದು ವೇಳೆ ಲೋಕಸಭೆ ಚುನಾವಣೆಗೆ ಮಾತ್ರ ಮೈತ್ರಿ ಮಾಡಿಕೊಂಡರೆ ಪರವಾಗಿಲ್ಲ. ಆದರೂ ಅದು ಪಕ್ಷದ ಬಲವರ್ಧನೆಯ ನಿರೀಕ್ಷೆಗಳ ಮೇಲೆ ಪರಿಣಾಮ ಬೀರುತ್ತದೆ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹಲವು ಶಾಸಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದ ಪಾಟೀಲ್, ಆದರೆ, ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು. ಭಾನುವಾರ ನಡೆದ ಜೆಡಿಎಸ್ ರಾಜ್ಯ ಮಟ್ಟದ ಸಭೆಗೆ ವೈಯಕ್ತಿಕ ಕಾರಣ ನೀಡಿ ಗೈರು ಹಾಜರಾಗಿದ್ದರು.

ಲೋಕಸಭೆ ಚುನಾವಣೆಗೆ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪಕ್ಷದ ಹಿರಿಯ ನಾಯಕರು ಈ ನಿರ್ಧಾರ ಕೈಗೊಂಡಿರಬಹುದು. ಜೆಡಿಎಸ್ ಏಕಾಂಗಿಯಾಗಿ ಹೋದರೆ ಹೆಚ್ಚಿನ ಸ್ಥಾನ ಪಡೆಯುವುದು ಕಷ್ಟ ಎಂದು ಕರಿಯಮ್ಮ ಹೇಳಿದರು. ಆದರೆ, ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಆಪ್ತ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಸಮರ್ಥಿಸಿಕೊಂಡಿದ್ದಾರೆ. ಇಂತಹ ಮೈತ್ರಿಗೆ ಸದಾ ವಿರೋಧ ವ್ಯಕ್ತಪಡಿಸುತ್ತಿದ್ದ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡ ಅವರೇ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಬಂಡೆಪ್ಪ ಟಿಎನ್‌ಐಇಗೆ ತಿಳಿಸಿದ್ದಾರೆ. 

'ಅವರು ಮತ್ತು ಪಕ್ಷವು ಕಾಂಗ್ರೆಸ್‌ನೊಂದಿಗೆ ಎಷ್ಟು ಮಾನಸಿಕ ಸಂಕಟವನ್ನು ಅನುಭವಿಸಿರಬಹುದು ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಿ. ಷಡ್ಯಂತ್ರದಿಂದಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಲಾಭವಾಗಲಿದ್ದು, ಕೆಲ ಶಾಸಕರ ಅಸಮಾಧಾನ ನಿವಾರಣೆಯಾಗಲಿದೆ' ಎಂದರು.

SCROLL FOR NEXT