ರಾಜಕೀಯ

ಸಂವಿಧಾನ ಪ್ರತಿಯ ಪ್ರಸ್ತಾವನೆಯಿಂದ ಜಾತ್ಯತೀತ, ಸಮಾಜವಾದಿ ಪದ ನಾಪತ್ತೆ, ಬಿಜೆಪಿ ಅಸಹನೆಗೆ ಸಾಕ್ಷಿ: ಸಿಎಂ ಸಿದ್ದರಾಮಯ್ಯ

Nagaraja AB

ಬೆಂಗಳೂರು: ನೂತನ ಸಂಸತ್ ಭವನದ ಪ್ರವೇಶದ ನೆನಪಿಗಾಗಿ ಸಂಸದರಿಗೆ ಕೇಂದ್ರ ಸರ್ಕಾರ ನೀಡಿರುವ ಸಂವಿಧಾನದ ಪ್ರತಿಯ ಪ್ರಸ್ತಾವನೆಯಿಂದ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಕಿತ್ತು ಹಾಕಿರುವುದು ಬಿಜೆಪಿ ಪಕ್ಷದ ಅಂತರಂಗದಲ್ಲಿ ಸಂವಿಧಾನದ ಬಗ್ಗೆ ಇರುವ ಅಸಹನೆಗೆ ಸಾಕ್ಷಿಯಾಗಿದ್ದು, ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, 1972ರಲ್ಲಿಯೇ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ‘’ಸಮಾಜವಾದಿ’’ ಮತ್ತು "ಜಾತ್ಯತೀತ" ಎಂಬ ಪದಗಳನ್ನು ಸೇರಿಸಲಾಗಿತ್ತು. ಈ ಪದಗಳನ್ನು ಕಿತ್ತುಹಾಕಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ, ಇದೊಂದು ದೇಶದ್ರೋಹ ಕೃತ್ಯವಾಗಿದೆ. ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.

ಅಟಲ್‌ಬಿಹಾರಿ ವಾಜಪೇಯಿ  ಪ್ರಧಾನಿಯಾಗಿದ್ದಾಗ ಸಂವಿಧಾನದ ಪುನರ್ ಪರಿಶೀಲನೆಗೊಳಪಡಿಸುವ ವಿಫಲ ಪ್ರಯತ್ನ ನಡೆದಿರುವುದನ್ನು ದೇಶದ ಜನತೆ ಮರೆತಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರದ ಕಾಲದಲ್ಲಿ ಬಿಜೆಪಿ ನಾಯಕರು ಮತ್ತು ಸಂಸದರು ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಸಿದ್ದಕ್ಕೆ ದೇಶ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

ಸಂವಿಧಾನವನ್ನು ಬದಲಾಯಿಸಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ  ಅನಂತ್‌ಕುಮಾರ ಹೆಗಡೆ ಬೇಜವಾಬ್ದಾರಿ ಹೇಳಿಕೆಯನ್ನು ಕನಿಷ್ಠ ಖಂಡಿಸುವ ಇಲ್ಲವೇ ಅವರ ವಿರುದ್ಧ ಕ್ರಮಕೈಗೊಳ್ಳುವ ಕೆಲಸವನ್ನೂ ನರೇಂದ್ರ ಮೋದಿ ಸರ್ಕಾರ ನೇರಾನೇರವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಧೈರ್ಯ ಇಲ್ಲದೆ ಈ ರೀತಿ ಅಡ್ಡದಾರಿ ಹಿಡಿದು ಸಂವಿಧಾನದ ಆಶಯಗಳನ್ನು ಅಳಿಸಿಹಾಕುವ ಪ್ರಯತ್ನ ನಡೆಸುತ್ತಿದೆ. ಅಂತಿಮವಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮನುಧರ್ಮ ಶಾಸ್ತ್ರವನ್ನು ಜಾರಿಗೊಳಿಸುವ ಗುಪ್ತ ಅಜೆಂಡಾದ ಭಾಗವಾಗಿಯೇ ಈ ಎಲ್ಲ ಕಸರತ್ತುಗಳು ನಡೆಯುತ್ತಿರುವಂತೆ ಕಾಣುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. 

SCROLL FOR NEXT