ಬೆಂಗಳೂರು: ಭಾರತೀಯ ಜನತಾ ಪಕ್ಷ-ಜಾತ್ಯತೀತ ಜನತಾದಳ ಮೈತ್ರಿ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗಿದೆ, ಒಂದು ಅಥವಾ ಎರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ದೆಹಲಿಗೆ ತೆರಳಿ ಕೇಂದ್ರ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ದೆಹಲಿಯಲ್ಲಿ ಜೆಡಿಎಸ್ ಮುಖಂಡರು ಸಭೆ ನಡೆಸಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಉಪಸ್ಥಿತರಿದ್ದರು. ಅಂತಿಮ ನಿರ್ಧಾರ ಕೈಗೊಳ್ಳಲು ವರಿಷ್ಠರಿಗೆ ಅಧಿಕಾರ ನೀಡಿದ್ದು, ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಪಕ್ಷದ ಮುಖಂಡರು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗಿನ ಸಭೆಯ ನಂತರ ಅಂತಿಮ ಜೆಡಿಎಸ್ ನಾಯಕರ ಹೇಳಿಕೆ ಹೊರ ಬೀಳಲಿದೆ.
ಗುರುವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ದೇವೇಗೌಡರು ಭೇಟಿ ಮಾಡಿ ಮಾತುಕತೆ ನಡೆಸಿದರೂ ವಿವರಗಳನ್ನು ಬಹಿರಂಗಪಡಿಸಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆ ಪ್ರಾರಂಭವಾಗಿಲ್ಲ, ಆ ಬಗ್ಗೆ ಬರುತ್ತಿರುವ ಸುದ್ದಿ ಕೇವಲ ಊಹಾಪೋಹ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೈತ್ರಿ ಬಗ್ಗೆ ನಾಳೆ ವಿವರವಾಗಿ ಹೇಳುತ್ತೇನೆ, ಅಗತ್ಯಬಿದ್ದರೆ ದೇವೇಗೌಡ-ಪ್ರಧಾನಿ ಮೋದಿ ಭೇಟಿ: ಹೆಚ್ ಡಿ ಕುಮಾರಸ್ವಾಮಿ
ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ತುಮಕೂರಿನಲ್ಲಿ ಮತ ವರ್ಗಾವಣೆ ನಡೆದರೆ ಮೈತ್ರಿಕೂಟದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕುತೂಹಲದ ಸಂಗತಿ ಎಂದರೆ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪೂರ್ ದೆಹಲಿಗೆ ತೆರಳಿಲ್ಲ. ಪಕ್ಷದ ಮೈತ್ರಿಗಾಗಿ ಬಿಜೆಪಿ ಕೇಂದ್ರ ನಾಯಕತ್ವವನ್ನು ಭೇಟಿ ಮಾಡಲು ದೆಹಲಿಗೆ ಹೋಗುವುದಾಗಿ ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿದ್ದರು. ಮೂರು ವಾರಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಸ್ವಾಮಿ ಜೊತೆಗೆ ಪುತ್ರ ನಿಖಿಲ್ ತೆರಳಿದ್ದಾರೆ, ದೇವೇಗೌಡರು ಈಗಾಗಲೇ ದೆಹಲಿಯಲ್ಲಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಹೋಗಲು ನಿರ್ಧರಿಸಿದರೆ, ನಾಯಕರು ಕೆಲವು ಅಸಮಾಧಾನವನ್ನು ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಬಿಜೆಪಿಯ ಕೆಲವು ವಿಭಾಗಗಳು ಜೆಡಿಎಸ್ ಜೊತೆ ಮೈತ್ರಿಗೆ ಒಲವು ಹೊಂದಿಲ್ಲದ ಕಾರಣ ಪಕ್ಷದೊಳಗೆ ಶೀಘ್ರದಲ್ಲೇ ಅಥವಾ ನಂತರ ಅಸಮಾಧಾನ ಎದುರಿಸಬೇಕಾಗಬಹುದು.