ರಾಜಕೀಯ

ಲೋಕಸಭಾ ಚುನಾವಣೆ: ಜನವರಿಗೂ ಮುನ್ನವೇ ರಾಜ್ಯದ ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ- ಡಿಸಿಎಂ ಡಿಕೆ ಶಿವಕುಮಾರ್

Nagaraja AB

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಉಭಯ ಪಕ್ಷಗಳ ಹಲವು ನಾಯಕರು ತಮ್ಮನ್ನು ಸಂಪರ್ಕಿಸಿದ್ದು, ಕಾಂಗ್ರೆಸ್ ಸೇರಲು ಬಯಸಿದ್ದಾರೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ರಾಜ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಜನವರಿಗೂ ಮುನ್ನಾ ಅಂತಿಮಗೊಳುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ..

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್,'ಬಿಜೆಪಿ-ಜೆಡಿ(ಎಸ್) ಮೈತ್ರಿ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಅನೇಕ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ, ಕೆಲ ಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ ನಂತರ ಅವರಿಗೆ ತಿಳಿಸುತ್ತೇನೆ ಎಂದರು. 

ಬಿಜೆಪಿ-ಜೆಡಿ(ಎಸ್)ನ ಹಲವು ನಾಯಕರು, ಗೆದ್ದವರು ಅಥವಾ ಸೋತವರು, ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ, ತಮ್ಮೊಂದಿಗೆ ಸಮಾಲೋಚನೆ ಮಾಡದ ಕಾರಣ ಮೈತ್ರಿಯಿಂದ ಸಂತೋಷವಿಲ್ಲ ಎಂದು ಹೇಳಿದ್ದಾರೆ. ಮೊದಲು (ಕಾಂಗ್ರೆಸ್) ಒಳಗೆ ಸಮಾಲೋಚಿಸುತ್ತೇನೆ. ಈಗಾಗಲೇ ಇತರ ಪಕ್ಷಗಳ ಕಾರ್ಯಕರ್ತರನ್ನು ಸೇರಿಸಿಕೊಳ್ಳಲು ಸ್ಥಳೀಯ ನಾಯಕರಿಗೆ ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಬಿಜೆಪಿ-ಜೆಡಿ(ಎಸ್) ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡಿಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಮುಖ್ಯಸ್ಥರು, ತಾಂತ್ರಿಕ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದಿಂದ ರಾಜ್ಯ ಸರ್ಕಾರದ ಬಹುತೇಕ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ, 28 ಕ್ಷೇತ್ರಗಳಿಗೆ ತಲಾ ಒಬ್ಬರಂತೆ 28 ಸಚಿವರನ್ನು ನೇಮಿಸಲಾಗಿದೆ.ಅವರು ಎಂಟರಿಂದ ಹತ್ತು ದಿನಗಳಲ್ಲಿ ಎರಡು ಅಥವಾ ಮೂರು (ಅಭ್ಯರ್ಥಿಗಳ) ಹೆಸರುಗಳನ್ನು ನೀಡುತ್ತಾರೆ. ನಾವು ಸಾಧ್ಯವಾದಷ್ಟು ಬೇಗ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ ಎಂದರು. 

ಲೋಕಸಭೆ ಚುನಾವಣೆಗೆ ರಾಜ್ಯದ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿ ಜನವರಿಗೂ ಮುನ್ನವೇ ಬಿಡುಗಡೆ ಮಾಡಿದರೆ ಆಶ್ಚರ್ಯವೇನಿಲ್ಲ, ಹತ್ತು ದಿನಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ಮೂವರು ಡಿಸಿಎಂ ಹುದ್ದೆ ಕುರಿತು ಬಹಿರಂಗವಾಗಿ ಚರ್ಚೆ ನಡೆಸದಂತೆ ಕಾಂಗ್ರೆಸ್ ಕೈಕಮಾಂಡ್ ಪತ್ರ ಕುರಿತು ಹೇಳಿಕೆ ನೀಡಲು ಅವರು ನಿರಾಕರಿಸಿದರು. 

 2024 ರ ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ತಲಾ ಒಬ್ಬರಂತೆ  ಇನ್ನೂ ಮೂರು ಉಪಮುಖ್ಯಮಂತ್ರಿಗಳ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಈ ವರ್ಷದ ಮೇನಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ತೀವ್ರ ಪೈಪೋಟಿಯ ನಡುವೆ ಶಿವಕುಮಾರ್ ಏಕೈಕ ಉಪ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ನಿರ್ಧರಿಸಿತ್ತು.

SCROLL FOR NEXT