ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ 
ರಾಜಕೀಯ

ನಿಮಗೇಕೆ ಜನ ಮತ ಹಾಕಬೇಕು?: BJPಗೆ ಡಿಕೆಶಿ ಪ್ರಶ್ನೆ

Manjula VN

ಬೆಂಗಳೂರು: ಚುನಾವಣೆಯಲ್ಲಿ ಜನರು ನಿಮಗೆ ಏಕೆ ಮತ ಹಾಕಬೇಕೆಂದು ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರಿಗೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಬುಧವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿರುವ ಅವರು. ಜನರು ಯಾವ ಕಾರಣಕ್ಕೆ ಮತ ಹಾಕಬೇಕು ಎಂದು ಎಲ್ಲ ಬಿಜೆಪಿ ನಾಯಕರನ್ನು ಕೇಳಲು ಬಯಸುತ್ತೇನೆ. ಅಧಿಕಾರಕ್ಕೆ ಬಳಿಕ ರಾಜ್ಯ ಮತ್ತು ಕೇಂದ್ರದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆಯೇ? ಕೊಟ್ಟ ಭರವಸೆ ಈಡೇರಿಸದ ಬಿಜೆಪಿ ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಬಳಿಕ ಕೇಂದ್ರದಿಂದ ಮಂಜೂರಾತಿಗೆ ಬಾಕಿ ಉಳಿದಿರುವ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಮಹದಾಯಿ, ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಎಲ್ಲೆಲ್ಲಿ ಅನುಮತಿ ನೀಡಿದ್ದೀರಿ? ನೀರಾವರಿ ಯೋಜನೆಗಳಷ್ಟೇ ಅಲ್ಲ, ರಾಜ್ಯ ಭೀಕರ ಬರ ಎದುರಿಸುತ್ತಿದ್ದಾಗಲೂ ಕೇಂದ್ರದಿಂದ ಯಾವುದೇ ಆರ್ಥಿಕ ನೆರವು ನೀಡಿಲ್ಲ.

ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಬಿಜೆಪಿ ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿದೆ. ಐಟಿ ಮತ್ತು ಇಡಿ ಹೆಸರಿನಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕುವ ಮೂಲಕ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದೆ, ಆದರೆ, ಜನರು ಅವರನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ಕೊಡಿಸಿ ಡಾ.ಮಂಜುನಾಥ್ ಅವರನ್ನು ಚುನಾವಣಾ ಕಣಕ್ಕಿಳಿಸಿದ್ದಕ್ಕೆ ಜೆಡಿಎಸ್‌ ಪಕ್ಷವನ್ನು ಟೀಕಿಸಿದ ಅವರು, ಜೆಡಿಎಸ್‌ ಕೂಡ ಶಕ್ತಿ ಕಳೆದುಕೊಂಡಿದೆ ಎಂದರು.

ಚುನಾವಣಾ ಬಳಿಕವೂ ನಮ್ಮ ಗ್ಯಾರಂಟಿ ಯೋಜನೆಗಳು ಮುಂದುವರೆಸುತ್ತವೆ. 1.20 ಕೋಟಿಗೂ ಹೆಚ್ಚು ಗೃಹ ಲಕ್ಷ್ಮಿ ಫಲಾನುಭವಿಗಳಿದ್ದಾರೆ. ಇದು ವೋಟ್ ಬ್ಯಾಂಕ್ ಅಲ್ಲ, ಲೈಫ್ ಬ್ಯಾಂಕ್ ಆಗಿದೆ. ಇದರಿಂದಾಗಿ ನಮ್ಮ ಸರ್ಕಾರ 10 ವರ್ಷಗಳ ಕಾಲ ಅಧಿಕಾರದಲ್ಲಿರುತ್ತದೆ. ನಮ್ಮ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮತ ಪಡೆಯಲು ಸುಳ್ಳು ಮಾಹಿತಿಗಳನ್ನು ಹರಡುತ್ತಿವೆ ಎಂದು ತಿಳಿಸಿದರು.

ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ನೀಡುತ್ತಿರುವ ವಿವಿಧ ಸಮೀಕ್ಷೆಗಳ ಫಲಿತಾಂಶಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನನಗೆ ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು.

ಯಾವುದೇ ಸಮೀಕ್ಷೆಗೆ ಮಾದರಿ ಗಾತ್ರವು ಮುಖ್ಯವಾಗುತ್ತದೆ. 4,000 ರಿಂದ 5,000 ಜನರನ್ನು ಸಂಪರ್ಕಿಸುವುದು ಸಮೀಕ್ಷೆಯಲ್ಲ. I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಮತ್ತು ಕರ್ನಾಟಕದಲ್ಲಿ ನಾವು 20 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಮಾತನಾಡಿ, ಒಂದು ನಿರ್ದಿಷ್ಟ ಸಮುದಾಯಕ್ಕೆ ನಾಯಕನಾಗುವ ಗುರಿ ನನಗಿಲ್ಲ. ನಾನು ಸಮುದಾಯದ ನಾಯಕನಲ್ಲ, ಕಾಂಗ್ರೆಸ್ ನಾಯಕ. ನಾನು ಹುಟ್ಟಿನಿಂದ ಒಕ್ಕಲಿಗನಾಗಿರಬಹುದು, ಆದರೆ, ಈಗ ನನಗೆ ಜಾತಿಯ ಅಡ್ಡಿಯಿಲ್ಲ. ಕುಮಾರಸ್ವಾಮಿಗೆ ವೈಯಕ್ತಿಕವಾಗಿ ಗೌರವ ಕೊಡುತ್ತೇನೆ. ಆದರೆ, ಬಂಡೆ ಒಡೆದ, ವಿಷ ಹಾಕಿದ, ಹೆಣ್ಣುಮಕ್ಕಳನ್ನು ಕಿಡ್ನಾಪ್‌ ಮಾಡಿ ಜಮೀನು ಬರೆಸಿಕೊಂಡ ಎಂದೆಲ್ಲಾ ವೈಯಕ್ತಿಕ ಮಟ್ಟದಲ್ಲಿ ಟೀಕೆ ಮಾಡಿದ್ದಕ್ಕೆ ನಾನೂ ಅದೇ ರೀತಿ ಉತ್ತರ ಕೊಟ್ಟಿದ್ದೇನೆ ಎಂದು ಸಮರ್ಥಿಸಿಕೊಂಡರು.

ಒಂದು ಕಾಲದಲ್ಲಿ ನಾನು ಬಂಡೆ ಒಡೆದಿದ್ದರೆ ಅದು ನನ್ನ ಜಮೀನಿನಲ್ಲಿ ಕಾನೂನುಬದ್ಧವಾಗಿ ಒಡೆದಿದ್ದೇನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಸಮುದಾಯದ ದೃಷ್ಟಿಯಿಂದ ನಾನು ಕುಮಾರಸ್ವಾಮಿ ಅವರಿಗೆ ಗೌರವ ಕೊಟ್ಟು ಅವರು ಏನೇ ಹೇಳುತ್ತಿದ್ದರೂ ಸಹಿಸಿಕೊಂಡು ಬಂದಿದ್ದೆ ಎಂದರು

ಬಿಜೆಪಿ ಅಧಿಕಾರಿಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳು ಸ್ಥಗಿತ

ಬಿಜೆಪಿಗೆ ಮತ ಹಾಕಿದರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳ್ಳುವಂತೆ ಮಾಡುತ್ತದೆ ಎಂದು ಇದೇ ವೇಳೆ ಡಿಕೆ ಶಿವಕುಮಾರ್ ಅವರು ಮತದಾರರಿಗೆ ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗ್ಯಾರಂಟಿ ಯೋಜನೆಗಳ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ನಾವು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರ ಗ್ಯಾರಂಟಿಗಳ ಅಲೆಯಿದೆ. ಇಂದು ಇಡೀ ದೇಶ ಕರ್ನಾಟಕದತ್ತ ನೋಡುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಗೆಲ್ಲುವ ಮೂಲಕ ಇನ್ನೂ ಒಂಬತ್ತು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತೇವೆ.135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಎಂದಿಗೂ ಪತನವಾಗುವುದಿಲ್ಲ ಎಂದರು

ಬಳಿಕ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನ ಪಡೆಯುವ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಕೇಂದ್ರದಲ್ಲಿ I.N.D.I.A ಒಕ್ಕೂಟ ಅಧಿಕಾರಕ್ಕೆ ಬರಲಿದೆ, ಫಲಿತಾಂಶದ ನಂತರ ನಾವು ನಮ್ಮ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ಕೊಪ್ಪಳದ ಮಾಜಿ ಸಂಸದ ಕರಡಿ ಸಂಗಣ್ಣ ಅವರ ಕುರಿತು ಮಾತನಾಡಿ, ಸಂಗಣ್ಣ ಸರಳ ಸಜ್ಜನರಾಗಿದ್ದು, ನಮ್ಮ ನೀತಿಗಳಿಂದಾಗಿ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ನ ಕಾರ್ಯಕ್ರಮಗಳು ರಾಜ್ಯದಲ್ಲಿ ಬಿಜೆಪಿಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. 1999 ರಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಸಂಗಣ್ಣ ಜೆಡಿಯು ಶಾಸಕರಾದರು ಮತ್ತು ಎರಡು ಬಾರಿ ಸಂಸದರಾಗಿ ಆಯ್ಕೆಯಾದರು. ಕೊಪ್ಪಳದಲ್ಲಿ ಉತ್ತಮ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು.

SCROLL FOR NEXT