ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ  
ರಾಜಕೀಯ

ಹಾಸನ ಸಮಸ್ಯೆಗಳ ಬಗೆಹರಿಸುವಲ್ಲಿ ಪ್ರಜ್ವಲ್ ವಿಫಲ: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್

Manjula VN

ಹಾಸನ: ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಹಾಸನ ಜಿಲ್ಲೆಯ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸದೆ ಜನರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಗುರುವಾರ ಕಿಡಿಕಾರಿದರು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರ್ಕಾರಿ ಇಲಾಖೆಗಳ ಗಮನ ಸೆಳೆಯುವಲ್ಲಿ ಪ್ರಜ್ವಲ್ ವಿಫಲರಾಗಿದ್ದಾರೆ. 2019 ರಲ್ಲಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರೂ, ಕಳೆದ ಐದು ವರ್ಷಗಳಿಂದ ಹಲವಾರು ಸಮಸ್ಯೆಗಳ ಬಗ್ಗೆ ಮೌನವಾಗಿಯೇ ಇದ್ದಾರೆಯ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಸ್ಥಳೀಯ ಗ್ರಾಮಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದರು. ಇದೀಗ ಜನರು 'ಮೋದಿ ಅಲೆ'ಯನ್ನು ಬದಿಗೊತ್ತಿ, ಕೇಂದ್ರದ ಬಡವರ ವಿರೋಧಿ ನೀತಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆಂದು ಹೇಳಿದರು.

ಇದೇ ವೇಳ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿಕೆ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ಮಹಿಳೆಯರ ಬಗ್ಗೆ ಅವರಲ್ಲಿರುವ ಮನಸ್ಥಿತಿಯನ್ನು ಮಹಿಳೆಯರು ಅರ್ಥಮಾಡಿಕೊಂಡಿದ್ದಾರೆ. ಈ ಸಂಬಂಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಟೀಕಿಸಿದ ಅವರು, ಜೆಡಿಎಸ್ ತನ್ನ ಹೆಸರಿನಿಂದ “ಜಾತ್ಯತೀತ” ಪದವನ್ನು ತೆಗೆದುಹಾಕುವುದು ಉತ್ತಮ, ಏಕೆಂದರೆ ಆ ಪಕ್ಷ ತನ್ನ ನೈತಿಕತೆ ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟ ಜೆಡಿಎಸ್, ಭವಿಷ್ಯದಲ್ಲಿ ರಾಜ್ಯದಿಂದ ಕಿತ್ತೊಗೆಯಲಿದೆ ಎಂದು ಹೇಳಿದರು.

SCROLL FOR NEXT