ರಾಜಕೀಯ

ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ... ಸುಟ್ಟರೆ ಮೇಣದಬತ್ತಿ ಹಚ್ಚಿ, ಹೂತ್ರೆ ಒಂದು ಹಿಡಿ ಮಣ್ಣಾಕಿ: ಖರ್ಗೆ ಭಾವನಾತ್ಮಕ ಮಾತು

Lingaraj Badiger

ಕಲಬುರಗಿ: ನೀವು ಕಾಂಗ್ರೆಸ್ ಗೆ ವೋಟ್ ಹಾಕಲು ಬರದೇ ಇದ್ದರೂ ಪರವಾಗಿಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಬುಧವಾರ ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಇಂದು ಕಲಬುರಗಿ ಜಿಲ್ಲೆಯ ಅಫಜಲ್​ಪುರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಪಕ್ಷಕ್ಕೆ ಮತ ಹಾಕಲು ಬಯಸದಿದ್ದರೂ ಪರವಾಗಿಲ್ಲ. ನಾನು ಸತ್ತರೆ ನಮ್ಮ ಕೆಲಸಗಳನ್ನು ನೆನಪು ಮಾಡಿಕೊಂಡು ಮಣ್ಣು ಹಾಕಲು ಬನ್ನಿ. ಸತ್ತಾಗ ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ, ಹೂಳಿದ್ರೆ ಒಂದು ಹಿಡಿ ಮಣ್ಣು ಹಾಕಲು ಬನ್ನಿ. ಆಗ ಜನರು ನೋಡಪ್ಪ ಆತನ ಅಂತ್ಯಕ್ರಿಯೆಗೆ ಎಷ್ಟು ಜನ ಬಂದರೂ ಅಂತ ಹೇಳಬೇಕು ಎಂದು ಭಾವುಕರಾದರು.

ನೀವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದಿದ್ದರೆ ಕಲಬುರಗಿ ಜನರ ಮನಸಿನಲ್ಲಿ ನನಗೆ ಯಾವುದೇ ಸ್ಥಾನವಿಲ್ಲ ಎಂದು ಭಾವಿಸುತ್ತೇನೆ ಎಂದರು. ಕಲಬುರಗಿಯಲ್ಲಿ ಬಿಜೆಪಿಯ ಹಾಲಿ ಸಂಸದ ಉಮೇಶ್ ಜಾಧವ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಲಾಗಿದೆ.

ಈ ಬಾರಿ ನಿಮ್ಮ ಮತವನ್ನು ತಪ್ಪಿಸಿಕೊಂಡರೆ(ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದಿದ್ದರೆ) ನನಗೆ ಇಲ್ಲಿ ಸ್ಥಾನವಿಲ್ಲ ಎಂದು ಭಾವಿಸುತ್ತೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ನನಗೆ ಸೋಲಾಯ್ತು. ಈ ಬಾರಿಯೂ ನಿಮ್ಮ ಮತ ತಪ್ಪಿದ್ರೆ ನಿಮ್ಮಗಳ ಹೃದಯ ಗೆಲ್ಲೋಕೆ ನನಗೆ ಸಾಧ್ಯವಾಗಿಲ್ಲ ಅಂತ ತಿಳಿದುಕೊಳ್ಳುತ್ತೇನೆ. ನಾನು ಹುಟ್ಟಿದ್ದೇ ರಾಜಕಾರಣಕ್ಕಾಗಿ. ಇದು ನನಗೆ ಕೊನೆಯ ಚುನಾವಣೆ ಅಲ್ಲ ಎಂದು ಹೇಳಿದರು.

ಸಂವಿಧಾನದ ತತ್ವ ಉಳಿಸಲು ಕೊನೆ ಉಸಿರು ಇರೋವರೆಗೂ ನಾನು ಹೋರಾಟ ನಡೆಸುತ್ತೇನೆ. ನಾಳೆ ಸಿಎಂ ಸಿದ್ದರಾಮಯ್ಯ ನಿವೃತ್ತಿ ಘೋಷಿಸಬಹುದು. ಆದರೆ ನಾನು ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವನ್ನು "ಸೋಲಿಸಲು" ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ಖರ್ಗೆ ಗುಡುಗಿದರು.

SCROLL FOR NEXT