ಬೆಂಗಳೂರು: ಮುಡಾ ಅಕ್ರಮ ಖಂಡಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಷರತ್ತು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 3ರಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಲಿದೆ ಎಂದು ಘೋಷಣೆಯಾಗಿದೆ. ಆದರೆ ಪಾದಯಾತ್ರೆ ಬಗ್ಗೆ ಜೆಡಿಎಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಮುಂದೂಡಿಕೆಯಾಗಲಿದೆ ಎನ್ನಲಾಗಿತ್ತು. ಆದರೆ ಬಿಜೆಪಿ ನಾಯಕರು ನಿಗದಿಯಂತೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಜೆಡಿಎಸ್ ನಾಯಕರ ಮನವೊಲಿಕೆ ಯತ್ನ ನಡೆಸಿದ್ದಾರೆ.
ಸದ್ಯ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಚ್.ಡಿ.ಕೆ ಮನವೊಲಿಕೆ ಯತ್ನ ಮಾಡಿದ್ದು, ಈ ವೇಳೆ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಭಾಗಿಯಾಗಬಾರದು. ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಇರದಿದ್ದರೆ ಮಾತ್ರ ಜೆಡಿಎಸ್ ಭಾಗಿಯಾಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಗೆ ಜೆಡಿಎಸ್ ಖಡಕ್ ಸಂದೇಶ ರವಾನಿಸಿದೆ. ಹೆಚ್.ಡಿ ಕುಮಾರಸ್ವಾಮಿ ಮನವೊಲಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹೆಚ್.ಡಿ.ಕೆ ಜೊತೆ ಚರ್ಚೆ ನಡೆಸಿದಾಗಲೂ ಇದೇ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.