ಕೇಂದ್ರ ಸಚಿವ ಕುಮಾರಸ್ವಾಮಿ 
ರಾಜಕೀಯ

10 ತಿಂಗಳು ಅಧಿಕಾರದಲ್ಲಿ ಮುಂದುವರಿಯಿರಿ ನೋಡೋಣ: ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಸವಾಲು!

'ದೇವೇಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಈ ರಾಜ್ಯದ ಉಪ ಮುಖ್ಯಮಂತ್ರಿ ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಕೊಡುತ್ತೇವೆ. ನಾವೂ ಕೂಡ ಅವರದ್ದು ಎಷ್ಟಿದೆ ಆಸ್ತಿ ಎನ್ನುವುದನ್ನು ಬಿಡುಗಡೆ ಮಾಡುತ್ತೇವೆ'

ಬೆಂಗಳೂರು: ಇನ್ನೂ ಹತ್ತು ವರ್ಷ ನಮ್ಮದೇ ಅಧಿಕಾರ, ಸರಕಾರ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಹತ್ತು ವರ್ಷದ ಮಾತಿರಲಿ, ಹತ್ತು ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಸವಾಲು ಹಾಕಿದ್ದಾರೆ.

ಬೆಂಗಳೂರಿನಿಂದ ಮೈಸೂರುವರೆಗೆ ಜೆಡಿಎಸ್ ಬಿಜೆಪಿ ಹಮ್ಮಿಕೊಂಡಿರುವ 'ಮೈಸೂರು ಚಲೋ ಪಾದಯಾತ್ರೆ' ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡುತ್ತಿಲ್ಲ. ನೀವೇ ಜನರು ಕೊಟ್ಟ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ. ಈಗ ನೋಡಿದರೆ ಜೆಡಿಎಸ್ ಬಿಜೆಪಿ ಪಕ್ಷಗಳನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೊರಟಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.

ಇದು ಅತ್ಯಂತ ಭ್ರಷ್ಟ, ಕೆಟ್ಟ ಸರಕಾರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದು ಜನಪರ ಕೆಲಸ ಮಾಡುವುದು ಬಿಟ್ಟು ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರದಲ್ಲಿ ನಿರತರಾಗಿದ್ದೀರಿ. ಹಿಂದೆಂದೂ ಕಂಡಿರದಂತಹ ಭ್ರಷ್ಟ ಸರಕಾರವನ್ನು ಕಾಣುತ್ತಿದ್ದೇವೆ. ಈ ಕೆಟ್ಟ ಕಾಂಗ್ರೆಸ್ ಜನ ವಿರೋಧಿ ಸರಕಾರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಜನರಿಗೆ ಅಕ್ರಮಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಆದಿಶಕ್ತಿ ತಾಯಿ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿ ಯಡಿಯೂರಪ್ಪನವರ ಇನ್ನಿತರೆ ಮಾರ್ಗದರ್ಶಕರ ನೇತೃತ್ವದಲ್ಲಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ. ನಾಡಿನ ಜನತೆಯ ಅಭಿಪ್ರಾಯ ಏನಿದೆ ಅದರ ಪರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅವರು ಕಿಡಿಕಾರಿದರು.

ಡಿಕೆಶಿಯದ್ದು ನಾವು ಬಿಚ್ಚಿಡುತ್ತೇವೆ: ದೇವೇಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಈ ರಾಜ್ಯದ ಉಪ ಮುಖ್ಯಮಂತ್ರಿ ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಕೊಡುತ್ತೇವೆ. ನಾವೂ ಕೂಡ ಅವರದ್ದು ಎಷ್ಟಿದೆ ಆಸ್ತಿ ಎನ್ನುವುದನ್ನು ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಬರುತ್ತದೆ? ಸುಖಾಸುಮ್ಮನೆ ಜನರ ಗಮನ ಬೇರೆಡೆಗೆ ಸೆಳೆಯಲು ನಾನು ಹಿಂದುಳಿದವನು, ಅದಕ್ಕೆ ಹೊಟ್ಟೆ ಉರಿ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಿಡಿ ಶಿವು ಅವರು, ಕಾಂಗ್ರೆಸ್ ಎದುರಿಸಲು ಬಿಜೆಪಿ ಜತೆಗೆ ಜೆಡಿಎಸ್ ಸೇರಿಕೊಂಡಿದೆ ಎಂದು ಹೇಳಿದ್ದಾರೆ. ನಿಮ್ಮನ್ನು ಬುಡ ಸಮೇತ ಕಿತ್ತೊಗೆಯಲು ನಾವು ಜೊತೆಯಾಗೆ ಇರುತ್ತೇವೆ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ನನ್ನ ಪ್ರಶ್ನೆಗೆ ಪರಮೇಶ್ವರ್ ಉತ್ತರ ಕೊಡಲಿ: ಯಾದಗಿರಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಸಮಾಜದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆ ಅವರು ಜೀವ ಕಳೆದುಕೊಂಡರು? ಬದುಕು ಕೊನೆ ಮಾಡಿಕೊಂಡ ಆ ಪೊಲೀಸ್ ಅಧಿಕಾರಿಯ ಪತ್ನಿ ಹೇಳ್ತಾರೆ, ಪೋಸ್ಟಿಂಗ್ ಗೆ 25 ಲಕ್ಷ ರೂಪಾಯಿ ಲಂಚ ಹಣ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ತಾಯಿ ಯಾರ ವಿರುದ್ಧ ಆರೋಪ ಮಾಡಿದ್ದಾರೆ? ಅದರ ಬಗ್ಗೆ ಪರಮೇಶ್ವರ ಅವರು ಉತ್ತರ ಕೊಡಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು. ನನ್ನ ಬಣ್ಣ ಬದಲಾಗಲು ಸಾಧ್ಯವೇ ಇಲ್ಲ. ಇದು ಪರ್ಮನೆಂಟ್ ಬಣ್ಣ.. ಎಂದು ತಮ್ಮ ಬಣ್ಣದ ಬಗ್ಗೆ ಮಾತನಾಡಿದ ಸಚಿವರಿಗೆ ಟಾಂಗ್ ಕೊಟ್ಟರು.

ಹಣ ಕೊಳ್ಳೆ ಹೊಡೆಯೋದು ಸಾಮಾಜಿಕ ನ್ಯಾಯವೇ?: ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಎಂದು ಮಾತು ಮಾತಿಗೂ ಹೇಳುತ್ತೀರಿ. ದಲಿತರ ಉದ್ಧಾರ ಎಂದು ಭಾಷಣ ಬಿಗಿಯುತ್ತೀರಿ. ಆದರೆ, ಅಂಬೇಡ್ಕರ್ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದೀರಿ. ಬಾಬಾ ಸಾಹೇಬ್ ಅವರಿಗೆ ಗೌರವ ಕೊಡೋದು ಎಂದರೆ, ಯಾರಿಗಾಗಿ ಅವರು ತಮ್ಮ ಬದುಕು ಮುಡಿಪಿಟ್ಟು ಹೋರಾಟ ನಡೆಸಿದರೋ ಆ ಜನಗಳ ಹಣ ಕೊಳ್ಳೆ ಹೊಡೆಯೋದಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಮೈಸೂರು ಚಲೋ ಪಾದಯಾತ್ರೆಯು ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎಂದರು.

ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ವಚನ ಭ್ರಷ್ಟವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಹಿಂದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರ ಸರಕಾರವು ಪರಿಶಿಷ್ಟ ಸಮುದಾಯದ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಟೀಕಿಸಿದರು.

ಮೈಸೂರಿನ ಮುಡಾದ ಅವ್ಯವಹಾರದಡಿ ಬಡವರಿಗೆ ನಿವೇಶನಗಳನ್ನು ವಂಚಿಸಿದ್ದಾರೆ. 5 ಸಾವಿರ ಕೋಟಿಯ ಹಗರಣ ಅಲ್ಲಿ ನಡೆದಿದೆ. ಭ್ರಷ್ಟ ಅಧಿಕಾರಿಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಬೆಂಬಲ, ರಕ್ಷಣೆ ಕೊಡುತ್ತಿದ್ದಾರೆ. ಭ್ರಷ್ಟಾಚಾರ ತಮ್ಮ ಬುಡಕ್ಕೆ ಬರುವ ಆತಂಕದಿಂದ ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT