ಡಿಸಿಎಂ ಡಿಕೆ ಶಿವಕುಮಾರ್ 
ರಾಜಕೀಯ

ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಾ? 'ಸಂಪತ್ತಿನ ಪಟ್ಟಿ' ಬಿಡುಗಡೆ ಮಾಡ್ತೀನಿ!

“ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಾ? ನೀನು ಹಿಟ್ ಅಂಡ್ ರನ್, ಬ್ಲಾಕ್ ಮೇಲರ್”

ಚನ್ನಪಟ್ಟಣ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಣ 'ಸಂಪತ್ತಿನ' ವಿಚಾರದಲ್ಲಿ ಭಾರೀ ಜಟಾಪಟಿ ಶುರುವಾಗಿದೆ.

ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಜನಾಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್, “ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಾ? ನೀನು ಹಿಟ್ ಅಂಡ್ ರನ್, ಬ್ಲಾಕ್ ಮೇಲರ್” ಎಂದು ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು.

“ಕುಮಾರಣ್ಣ, ನೀನು ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಬದಲು ಮೊದಲಿನಿಂದಲೂ ಚರ್ಚೆ ಮಾಡು. ನಿನ್ನ ಸಹೋದರ ಬಾಲಕೃಷ್ಣ ಗೌಡ ಅವರ ಕುಟುಂಬ ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು ಬೇನಾಮಿಗಳು ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ರಾಮನಗರದಲ್ಲಿ ಉತ್ತರ ನೀಡಬೇಕು. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ, ಯಾವ ಈರುಳ್ಳಿ, ಆಲುಗಡ್ಡೆಯಲ್ಲಿ ಅದು ಸಂಪಾದನೆ ಆಯ್ತು? ಎಂದು ಲೆಕ್ಕ ಕೊಡಬೇಕು” ಎಂದು ಸವಾಲೆಸೆದರು.

“ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ನಾನು ಉದ್ದಿಮೆದಾರ ಎಂದು ಹೇಳಿಕೊಂಡಿದ್ದೇನೆ. ನೀನು ಆ ರೀತಿ ಹೇಳಿಲ್ಲ. ನಾನು ಪಂಚೆಯುಟ್ಟು ಹೊಲ ಉಳುಮೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದೀಯ. ಮಣ್ಣಿನ ಮಗ ಎಂದು ಹೇಳಿದ್ದೀಯ. ನಿಮ್ಮ ತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀವಲ್ಲ ಎಂದರು.

“ನನ್ನ ಕುಟುಂಬದ ಮೇಲೆ ಕೇಸ್ ದಾಖಲಿಸಿ ಏನು ಮಾಡಿದಿರಿ? ಏನು ಮಾಡಲು ಆಗಿಲ್ಲ. ಮಿಲಿಟರಿಯವರು ಬಂದು ನನ್ನನ್ನು ಕರೆದುಕೊಂಡು ಹೋಗಲಿದ್ದಾರೆ ಎಂದು ನೀನು ಹೇಳಿದ್ದೀಯಾ. ಹಾಗಿದ್ದರೆ ನಾನು ಜೈಲಲ್ಲಿ ಇದ್ದಾಗ ಯಾಕೆ ಬಂದು ನನ್ನನ್ನು ನೋಡಿದೆ? ನನ್ನ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಅದು ಗೊತ್ತಿದೆಯೇ? ನನ್ನ ಕುಟುಂಬದವರ ಮೇಲೆ ಹಾಕಿಸಿದ್ದ ಕೇಸು ವಜಾ ಆಗಿದೆ ಗೊತ್ತಿದೆಯಾ?” ಎಂದು ಕುಟುಕಿದರು. “ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಗಣಿ ಕೇಸ್ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಕುಟುಂಬದವರ ಆಸ್ತಿ ಇನ್ನು ಬಿಡುಗಡೆ ಮಾಡಿಲ್ಲ. ಪಟ್ಟಿ ಬಿಡುಗಡೆ ಮಾಡುತ್ತೇನೆ” ಎಂದು ಸವಾಲೆಸೆದರು.

ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ, ಅದೇ ರೀತಿ ಎಲ್ಲರೂ ರೈತನ ಮಗ ಆಗುವುದಿಲ್ಲ: “ನೀವು ರೈತನ ಮಗ ಎಂದು ಹೇಳುತ್ತೀರಿ. ಹುಟ್ಟಿದವೆಲ್ಲಾ ಬಸವ ಆಗುವುದಿಲ್ಲ’. ಅಂದರೆ ಹಳ್ಳಿಗಳಲ್ಲಿ ಹುಟ್ಟುವ ಎಲ್ಲಾ ಕರುಗಳು ಬಸವ ಆಗಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ರೈತರು ರೈತರ ಮಕ್ಕಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ರೈತರ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ಜಮೀನು ನೀಡಿದ್ದೇವೆ. ಅರಣ್ಯ ಕಾಯ್ದೆಯಲ್ಲಿ ರೈತರಿಗೆ ಜಮೀನು ನೀಡಿದ್ದೇವೆ. ಕುಮಾರಸ್ವಾಮಿ ಅವರೇ, ನೀವು ಒಂದು ಸಭೆ ಮಾಡಿ ಒಬ್ಬ ರೈತನಿಗೆ ಬಗರ್ ಹುಕುಂ ಜಮೀನು ನೀಡಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಹಿಡ್ ಅಂಡ್ ರನ್, ಬ್ಲಾಕ್ ಮೇಲರ್: ಕುಮಾರಸ್ವಾಮಿ ನೀನು ಕೇವಲ ಹಿಟ್ ಅಂಡ್ ರನ್. ಬ್ಲಾಕ್ ಮೇಲರ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿ.ಟಿ ದೇವೆಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನಿನ್ನ ಮಗನ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನೀನು ಒಂದು ಹೇಳಿಕೆ ನೀಡಿದೆ. ಈ ನಾಟಕ ಏಕೆ?” ಎಂದು ಪ್ರಶ್ನಿಸಿದರು. “ಪಾದಯಾತ್ರೆಗೆ ಬರಲ್ಲ ಎಂದು ಹೇಳಿದವನು, ಈಗ ಯಾಕೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೀಯಾ? ಕೇವಲ ನಿನ್ನ ಅಧಿಕಾರಕ್ಕೋಸ್ಕರ. ನಿನ್ನ ಪಕ್ಷವನ್ನು ಮುಳುಗಿಸಲು ಹೊರಟಿದ್ದೀಯಾ” ಎಂದು ಮಾತಿನ ಮೂಲಕ ತಿವಿದರು.

ಕುಮಾರಸ್ವಾಮಿ ನವರಂಗಿ ಬಣ್ಣ ಬಯಲಾಗಬೇಕು: ಕುಮಾರಸ್ವಾಮಿ ಅವರು ಮಂಡ್ಯ ಚುನಾವಣೆ ವೇಳೆ ಎನ್ ಡಿಎ ಸರ್ಕಾರ ಬಂದರೆ ಐದು ನಿಮಿಷದಲ್ಲಿ ಮೋದಿ ಅವರ ಜತೆ ಮಾತಾಡಿ ಮೇಕೆದಾಟಿಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು. ಈಗ ನಾನು ಹಾಗೆ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಏನೆಲ್ಲಾ ಹೇಳಿದ್ದಾರೆ ಅವುಗಳನ್ನು ದೊಡ್ಡ ಪರದೆಯಲ್ಲಿ ಹಾಕಿಸಬೇಕು. ಅವರ ನವರಂಗಿ ಬಣ್ಣ ರಾಜ್ಯದ ಜನತೆಗೆ ಅರ್ಥವಾಗಬೇಕು ಎಂದು ತಿಳಿಸಿದರು.

ಕುಮಾರಸ್ವಾಮಿ ಅವರೇ ನೀವು ನಿಮ್ಮ ಟೂರಿಂಗ್ ಟಾಕೀಸ್ ರಾಜಕಾರಣ ಮಾಡಿ ನಮ್ಮ ಅಭ್ಯಂತರವಿಲ್ಲ. ಮಧುಗಿರಿ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮಾಡಿ, ಮುಂದೆ ಕನಕಪುರಕ್ಕೂ ಬನ್ನಿ. ಕೆಲವರು ನಿಮ್ಮನ್ನು ತಿರಸ್ಕರಿಸಿದ್ದಾರೆ, ಮತ್ತೆ ಕೆಲವರು ಗೆಲ್ಲಿಸಿದ್ದಾರೆ. ಎಲ್ಲಾ ದಿನ ಒಂದೇ ಆಗಿರುವುದಿಲ್ಲ. ಜನ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.

ಬಿಜೆಪಿ, ಜೆಡಿಎಸ್ ನವರದ್ದು ಪಾಪ ವಿಮೋಚನಾ ಯಾತ್ರೆ: “ಬಿಜೆಪಿ ಹಾಗೂ ಜೆಡಿಎಸ್ ನವರದ್ದು ಪಾಪವಿಮೋಚನಾ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡಿರುವ ಎಲ್ಲಾ ಪಾಪಗಳನ್ನು ಕಳೆದುಕೊಳ್ಳಲು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿ ಆಗಬಹುದು. ಆದರೂ ಇಲ್ಲಿ ನಿಜವಾದ ಅಭ್ಯರ್ಥಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್. ಇಲ್ಲಿ ಹಸ್ತದ ಗುರುತೇ ಅಭ್ಯರ್ಥಿ. ನಾನು ಇಲ್ಲಿನ ಶಾಸಕನಂತೆ ಕೆಲಸ ಮಾಡುತ್ತೇನೆ. ಇದಕ್ಕೆ ನೀವು ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT