ಬೆಂಗಳೂರು: ಮೈಸೂರು ಅಭಿವೃದ್ಧಿ ನಿಗಮದ ಮುಡಾ ಹಗರಣ ಬಹಿರಂಗ ಮಾಡಿದ್ದೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ 14 ನಿವೇಶನ ಮಂಜೂರು ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವನ್ನು ಜಗಜ್ಜಾಹಿರು ಮಾಡಿದ್ದು ಅವರದ್ದೇ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು 'ಸಿದ್ದರಾಮಯ್ಯನವರ ಪತ್ನಿಗೆ ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಗೊಳಿಸಿದ್ದು ಅವರೇ (ಶಿವಕುಮಾರ್). ಆದರೆ ಈಗ ಸಿದ್ದರಾಮಯ್ಯನವರಿಗೆ ಗುರಾಣಿ ಎಂಬಂತೆ ವರ್ತಿಸುತ್ತಿದ್ದಾರೆ. ಈ ನಾಟಕ ನಿಲ್ಲಿಸುವುದು ಯಾವಾಗ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನು 10 ತಿಂಗಳು ಕೂಡ ಇರಲ್ಲ. ಕಾಂಗ್ರೆಸ್ ಪಕ್ಷದ ಹಲವು ನಾಯಕರು ಸಿಎಂ ಸ್ಥಾನಕ್ಕೆ ಹಕ್ಕು ಚಲಾಯಿಸಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.