ಡಿ.ಕೆ ಶಿವಕುಮಾರ್ 
ರಾಜಕೀಯ

ಕುಮಾರಸ್ವಾಮಿಯನ್ನು ಅಣ್ಣ ಎಂದುಕೊಂಡಿದ್ದೆ; ಅವರ ಬೆದರಿಕೆಗೆ ಹೆದರಿ ಕೂರುವ ರಕ್ತ ನನ್ನದಲ್ಲ: ಡಿ.ಕೆ ಶಿವಕುಮಾರ್

ನಾನು ಕೇವಲ ವ್ಯವಸಾಯದಲ್ಲಿ ಆಸ್ತಿ ಮಾಡಿದ್ದೇನೆ ಎಂದು ಹೇಳುವುದಿಲ್ಲ. ನಾನು ಎಷ್ಟು ರಾಜಕಾರಣಿಯೋ, ಅಷ್ಟೇ ಉದ್ಯಮಿಯೂ ಹೌದು.

ಬೆಂಗಳೂರು: ಕಳೆದ ಎರಡು ಮೂರು ವರ್ಷಗಳಿಂದ ಕುಮಾರಸ್ವಾಮಿ ಅವರ ಟೀಕೆಗಳನ್ನು ಸಹಿಸಿಕೊಂಡಿದ್ದೆ. ಮಗನ ಸೋಲಿನ ನಂತರ ಅವರ ಮಾತು ಮಿತಿ ಮೀರಿದೆ. ನಾನು ಎಷ್ಟು ದಿನ ಸಹಿಸಲಿ. ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡಿದ್ದೇನೆ. ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅವರ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದರು.

ಕುಮಾರಸ್ವಾಮಿ ಅವರು ಮೊದಲು ನನ್ನ ಬಗ್ಗೆ ಏನೆಲ್ಲಾ ಹೇಳಿದರು? ಸಂಸತ್ ಚುನಾವಣೆ ಸೋತ ಬಳಿಕ ಕುಮಾರಸ್ವಾಮಿ ಏನ್ನೆಲ್ಲಾ ಮಾತನಾಡಿದ್ದಾರೆ ಎಂದು ಮಾಧ್ಯಮಗಳೇ ತೋರಿಸಲಿ. ಅವರು ಹೇಳಿರುವುದಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರ ಜತೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ನಾನು ಬಹಳ ತಾಳ್ಮೆಯಿಂದ ಇದ್ದೆ. ಅವರನ್ನು ಅಣ್ಣ ಎಂದು ಸ್ವೀಕಾರ ಮಾಡಿದ್ದೆ. ಅವರು ಈ ರೀತಿ ಮಾತನಾಡಿದರೆ ನಾನು ಹೆದರಿ ಕೂರಲು ಸಾಧ್ಯವೇ? ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ನನ್ನದು ಹೆದರಿ ಕೂರುವ ರಕ್ತವಲ್ಲ ಎಂದರು.

ಕುಮಾರಸ್ವಾಮಿ ಅವರು ನನಗೆ ಎಚ್ಚರಿಕೆ ಕೊಟ್ಟಿದ್ದಾರಲ್ಲ. ಇಂತಹ ಬೆದರಿಕೆಗೆ ಈ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ. ನನ್ನ ವಿರುದ್ಧ ಇರುವ ದಾಖಲೆ ಗೌಪ್ಯವಾಗಿ ಇರಬಾರದು. ಅದನ್ನು ಬಿಚ್ಚಿಡಲಿ. ಅವರ ಬುಟ್ಟಿಯಲ್ಲಿ ಹಾವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ವಿಧವೆಯರಿಗೆ ಗನ್ ಪಾಯಿಂಟ್ ನಲ್ಲಿಟ್ಟು ಈ ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹಾಗಿದ್ದರೆ ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಿಸಲಿ ಎಂದು ಸವಾಲೆಸೆದರು.

ನಾನು ಕೇವಲ ವ್ಯವಸಾಯದಲ್ಲಿ ಆಸ್ತಿ ಮಾಡಿದ್ದೇನೆ ಎಂದು ಹೇಳುವುದಿಲ್ಲ. ನಾನು ಎಷ್ಟು ರಾಜಕಾರಣಿಯೋ, ಅಷ್ಟೇ ಉದ್ಯಮಿಯೂ ಹೌದು. ನಾನು ಯಾರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸಿಕೊಂಡಿದ್ದೇನೆ ಹೇಳಲಿ. ಕುಮಾರಸ್ವಾಮಿ ಕೇತಗಾನಹಳ್ಳಿಯಲ್ಲಿ ದಲಿತರ ಭೂಮಿ ಲೂಟಿ ಮಾಡಿದ್ದಾರೆ ಎಂದು ಯೋಗೇಶ್ವರ್ ಮಾತನಾಡಿದ್ದಾರೆ. ಅಲ್ಲಂ ವೀರಭದ್ರಪ್ಪ ಖರೀದಿ ಮಾಡಿದ್ದ ಆಸ್ತಿಯನ್ನು ನನ್ನ ಮಗಳು ಖರೀದಿ ಮಾಡಿದ್ದಾಳೆ. ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ನಾನು ಆಸ್ತಿ ಖರೀದಿ ಮಾಡುತ್ತೇನೆ. ಇನ್ನು ಮಾರಾಟವಾಗಲು ಸಿದ್ಧವಿರುವ ಜಾಗಗಳಿದ್ದರೆ ಹೇಳಿ ಖರೀದಿ ಮಾಡುತ್ತೇನೆ ಎಂದರು.

ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ನಾನು ಗಮನಿಸಿಲ್ಲ. ಅವರೋಬ್ಬರೇ ಗಂಡಸು. ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಒಮ್ಮೆ ನೋಡಿ. ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ. ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲು ನೋಡಿರುವವನು. ನಾನು ಜೈಲಲ್ಲಿ ಇದ್ದಾಗ ಅವರು ಬಂದು ನನ್ನ ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆ ಎಂದರು ತಿರುಗೇಟು ನೀಡಿದರು. ನಾನು ಅವರ ಕುಟುಂಬದಲ್ಲಿ ಅವರ ಸಹೋದರನ ಆಸ್ತಿ ವಿವರ ಕೇಳಿದ್ದೇನೆ ನಿಜ. ಇವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನನ್ನ ಮೇಲೆ, ನನ್ನ ಸಹೋದರ, ತಂಗಿ, ಪತ್ನಿ ಮೇಲೆ ಅದಿರು ಕಳ್ಳತನದ ಸುಳ್ಳು ಕೇಸ್ ಹಾಕಿಸಿದ್ದರು. ಎಫ್ಐಆರ್ ದಾಖಲಿಸಿದ್ದರು. ಅದೆಲ್ಲವನ್ನು ಮರೆತು ನಾನು ಅವರು ಮುಖ್ಯಮಂತ್ರಿಯಾಗಲು ನೆರವಾಗಿದ್ದೆ. ಆನಂತರ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಅವರು ಸಿಎಂ ಆಗಿದ್ದಾಗ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಿದ್ದೆ. ನಾನು ಅವರ ಸುದ್ದಿಗೆ ಹೋಗುತ್ತಿರಲಿಲ್ಲ” ಎಂದು ತಿಳಿಸಿದರು.

“ನಾನು ಪ್ರಧಾನಮಂತ್ರಿ, ಮುಖ್ಯಮಂತ್ರಿಯ ಮಗನಾಗಿ ರಾಜಕೀಯಕ್ಕೆ ಬಂದಿಲ್ಲ. ನಾನು ಬಡವನಲ್ಲದಿದ್ದರೂ ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದವನು. ನನ್ನ ಆಸ್ತಿ ಮಾಹಿತಿ ತೆರೆದ ಪುಸ್ತಕದಂತೆ. ನಾನು ಬದುಕಲು ಸಾಧ್ಯವಾಗದಂತಹ ದಾಖಲೆ ಏನಿದೆಯೋ ಅದನ್ನು ಬಿಚ್ಚಿಡಲಿ. ನಾನು ಅಂತಹ ಮಾಡಬಾರದ ತಪ್ಪು ಏನು ಮಾಡಿದ್ದೇನೆ ತಿಳಿಯಲಿ. ದಾಖಲೆ ಬಿಚ್ಚಿಡಲು ನಿಮ್ಮನ್ನು ತಡೆದಿರುವವರು ಯಾರು? ದಾಖಲೆ ಸಮೇತ ಸದನದಲ್ಲಿ ಚರ್ಚೆಗೆ ಬನ್ನಿ ಎಂದು ನೀವು ಶಾಸಕರಾಗಿದ್ದಾಗಲೆ ನಾನು ಎರಡು ಬಾರಿ ಆಹ್ವಾನ ಕೊಟ್ಟಿದ್ದೇನೆ. ನೀನು ಯಾಕೆ ಬರಲಿಲ್ಲ? ಚರ್ಚೆ ಮಾಡಲಿಲ್ಲ? ಈಗಲೂ ನಿಮ್ಮ ಶಾಸಕರ ಕೈಗೆ ದಾಖಲೆ ಕೊಟ್ಟು ಚರ್ಚೆಗೆ ಕಳಿಸು. ನಾನು ಚರ್ಚೆಗೆ ಸಿದ್ಧನಿದ್ದೇನೆ” ಎಂದು ತಿರುಗೇಟು ನೀಡಿದರು. “ನೀನು ದೆಹಲಿಯಲ್ಲಿ ನನ್ನ ವಿರುದ್ಧ ಯಾರಿಗೆ ಯಾವ ಪತ್ರ ನೀಡಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ತಂದೆ ಏನೆನು ಬರೆದಿದ್ದಾರೆ ಎಂದು ನನಗೆ ಮಾಹಿತಿ ಇದೆ. ದೆಹಲಿಯಲ್ಲಿ ಏನೆಲ್ಲಾ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದಿದೆ. ಅವರ ಸಹೋದರ ಇದ್ದಾನಲ್ಲ ಅಬ್ಬಾಬ್ಬಾ. ಅವನ ಹೆಸರಲ್ಲಿ ಎಷ್ಟು ಸಾವಿರ ಕೋಟಿ ಆಸ್ತಿ ಇದೆ” ಎಂದು ಸವಾಲೆಸೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT