ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಉತ್ತಮ ಹೆಸರು ಮಾಡಲು ನಾನು ಹೋರಾಡುತ್ತಿದ್ದೇನೆ. ಹೌದು, ನಾನು ಸ್ವಾರ್ಥಿ. ನಿಸ್ವಾರ್ಥ, ತ್ಯಾಗ ಮಾಡಲು ನಾನು ಸಂತನಲ್ಲ, ಉನ್ನತ ಸ್ಥಾನಕ್ಕೇರಲು ಹೋರಾಡುತ್ತಿದ್ದೇನೆ. ಮುಂದೊಂದು ದಿನ ನಂ.1 ರಾಜಕಾರಣಿಯಾಗುತ್ತೇನೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ಹಗರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕಲ್ಯಾಣ-ಕರ್ನಾಟಕ ಪ್ರದೇಶದಲ್ಲಿ ಜಾಗೃತಿ ಮೂಡಿಸಿ ಇದೀಗ ಕಿತ್ತೂರು-ಕರ್ನಾಟಕ ಪ್ರದೇಶವನ್ನು ಪ್ರವೇಶಿಸುತ್ತಿದ್ದೇವೆ, ಸೋಮವಾರ ಸಂಜೆ ದೆಹಲಿಗೆ ಭೇಟಿ ನೀಡಲಿದ್ದು, ಮಠಗಳು ಮತ್ತು ದೇವಾಲಯಗಳ ಆಸ್ತಿಗಳ ಕುರಿತು ಜಂಟಿ ಸಂಸದೀಯ ಸಮಿತಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ನಾಯಕತ್ವದ ವಿಷಯದಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಮೀಸಲಾತಿ ವಿಚಾರವಾಗಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಬೆದರಿಕೆ ಹಾಕುತ್ತಿದ್ದು, ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಸಿದ್ದರಾಮಯ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ವಿರುದ್ಧ ದೂರು ನೀಡಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಕುಟುಂಬದ ಬಗ್ಗೆ ನಾವು ಏನೂ ಮಾತನಾಡಿಲ್ಲ, ಯಾವುದೇ ಗೊಂದಲವಿಲ್ಲ ಎಂದರು.
ವಕ್ಫ್ ಬೋರ್ಡ್ ಬಗ್ಗೆ ಮಾತನಾಡುವುದರಲ್ಲಿ ತಪ್ಪೇನಿದೆ? ವಕ್ಫ್ ದೇಶಕ್ಕೆ ಒಂದು ರೋಗ ಇದ್ದಂತೆ. ವಿವಾದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಅವರು ಬೆಂಕಿ ಹಚ್ಚಿದ್ದಾರೆ, ರಾಜ್ಯದಲ್ಲಿ 1.15 ಲಕ್ಷ ಎಕರೆ ವಕ್ಫ್ ಭೂಮಿ ಇದೆ ಎಂದು ಹಿಂದೆ ಹೇಳಿದ್ದರು, ಈಗ ಅವರು 6 ಲಕ್ಷ ಎಕರೆ ಎಂದು ಹೇಳುತ್ತಿದ್ದಾರೆ. ದೆಹಲಿಯಿದ ವಾಪಸ್ಸಾದ ಬಳಿಕ ವಕ್ಫ್ ವಿರುದ್ಧ ನಮ್ಮ ಎರಡನೇ ಹಂತದ ಹೋರಾಟ ಆರಂಭವಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ದಲಿತರೊಬ್ಬರ ಮೇಲೆ ವಕ್ಫ್ ಆಸ್ತಿ ವಿಚಾರವಾಗಿ ಹಲ್ಲೆ ನಡೆದಿದೆ. ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ.
ಬಸವಣ್ಣನವರ ಅನುಭವ ಮಂಟಪ ‘ಪೀರಬಾಷಾ ದರ್ಗಾ’ವಾಗಿ ಮಾರ್ಪಟ್ಟಿದೆ. ಅದರ ಬಗ್ಗೆ ಮಾತನಾಡಲಿ, ನನ್ನ ಹೆಸರಿನಲ್ಲಿಯೇ ಬಸವಣ್ಣ ಇದೆ. ಒಂದು ಸಾವಿರ ಆಕಳು ಕಟ್ಟಿದ್ದೇನೆ. ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸದಂತೆ ನಡೆಯುತ್ತಿದ್ದೇನೆಂದು ತಿರುಗೇಟು ನೀಡಿದರು.