ಪ್ರಿಯಾಂಕ್ ಖರ್ಗೆ - ಕೃಷ್ಣ ಬೈರೇಗೌಡ 
ರಾಜಕೀಯ

ಮುಡಾ ಹಗರಣ: ಇಡಿ ಸೀಳು ನಾಯಿ ಎಂದ ಕೃಷ್ಣ ಬೈರೇಗೌಡ; ಕೇಂದ್ರ ಸರ್ಕಾರದ ಕೈಗೊಂಬೆ- ಪ್ರಿಯಾಂಕ್ ಖರ್ಗೆ ಕಿಡಿ

ಇಡಿ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ತನಿಖೆ ಗೌಪ್ಯವಾಗಿರಬೇಕು ಮತ್ತು ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ) ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಲೋಕಾಯುಕ್ತ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಹಲವು ಸಚಿವರು ಬುಧವಾರ ಕೇಂದ್ರ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಮುಡಾ ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಬಿಎಂ, ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣ ಸಂಬಂಧ ಇಡಿ ಇತ್ತೀಚಿಗೆ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಪತ್ರ ಬರೆದಿದ್ದು, ಅದರಲ್ಲಿ ಮುಡಾ ಒಟ್ಟು 1,095 ಸೈಟ್‌ಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ 'ಅಕ್ರಮವಾಗಿ' ಮಂಜೂರು ಮಾಡಿದೆ ಎಂಬುದು ತನ್ನ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ವೇಳೆ, ಭೂಪರಿವರ್ತನೆಯಲ್ಲಿ ‘ಕಾನೂನುಬದ್ಧ ಮಾರ್ಗಸೂಚಿಗಳ ಉಲ್ಲಂಘನೆ’, ಕಚೇರಿಯ ಕಾರ್ಯವಿಧಾನಗಳ ಉಲ್ಲಂಘನೆ, ‘ಅನಾವಶ್ಯಕ’ ಕೃಪಾಕಟಾಕ್ಷ ಮತ್ತು ಪ್ರಭಾವದ ಬಳಕೆ ಹಾಗೂ ಸಹಿಗಳ ‘ಫೋರ್ಜರಿ’ಗೆ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ಪತ್ರದಲ್ಲಿ ತಿಳಿಸಿದೆ.

ಇಡಿ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ತನಿಖೆ ಗೌಪ್ಯವಾಗಿರಬೇಕು ಮತ್ತು ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ತನಿಖಾ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದು ಅವರ ಹತಾಶೆಯನ್ನು ತೋರಿಸುತ್ತದೆ ಮತ್ತು ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಆದರೂ ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ ಎಂದು ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಇನ್ನು ಗೃಹ ಸಚಿವ ಜಿ ಪರಮೇಶ್ವರ ಅವರು ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಎರಡು ತನಿಖಾ ಸಂಸ್ಥೆಗಳು ಒಂದೇ ವಿಷಯವನ್ನು ಏಕಕಾಲದಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ. ಇಡಿ ಒಂದು ತೀರ್ಮಾನಕ್ಕೆ ಬಂದಿದ್ದು ಮಾತ್ರವಲ್ಲದೆ ಲೋಕಾಯುಕ್ತದ ಮೇಲೂ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದರು.

ನೀವು ಲೋಕಾಯುಕ್ತ ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದೀರಿ, ಅವರ ತನಿಖೆಗೆ ಅಡ್ಡಿಯಾಗುತ್ತಿದ್ದೀರಿ ಅಥವಾ ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕೆಂದು ಪರೋಕ್ಷವಾಗಿ ಹೇಳುತ್ತಿದ್ದೀರಿ. ಆದರೆ ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಡಿ ಕೇಂದ್ರ ಸರ್ಕಾರದ ಕೈಗೊಂಬೆ

ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು ಕೇಂದ್ರ ಸರ್ಕಾರ ಕೈಗೊಂಬೆಗಳಾಗಿವೆ. ಎಲ್ಲೆಲ್ಲಿ ಬಿಜೆಪಿಯ ರಾಜ್ಯ ಘಟಕಗಳು ದುರ್ಬಲವಾಗಿವೆಯೋ, ಅಂತಹ ಕಡೆ ಸಿಬಿಐ, ಇಡಿ, ಐಟಿಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಕೆ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಖರ್ಗೆ, ರಾಜ್ಯದಲ್ಲೂ ದುರ್ಬಲವಾಗಿರುವ ಬಿಜೆಪಿ ಘಟಕ ಹೈಕಮಾಂಡ್ ಮೇಲೆ ಒತ್ತಡ ಹಾಕಿ, ಇಡಿ ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಕರ್ನಾಟಕ, ತಮಿಳುನಾಡು, ಜಾರ್ಖಂಡ್ ಗಳಲ್ಲಿ ಇಡಿಯನ್ನು ರಾಜಕೀಯ ಅಸ್ತ್ರವಾಗಿ ಕೇಂದ್ರ ಸರ್ಕಾರ ಬಳಕೆ ಮಾಡುತ್ತಿದೆ. ಮುಡಾ ಪ್ರಕರಣದಲ್ಲಿ ಇಡಿ ಹೇಗೆ ಪ್ರವೇಶ ಮಾಡಿತು ಎಂಬುದೇ ಗೊತ್ತಾಗುತ್ತಿಲ್ಲ. ಮನಿ ಲಾಂಡರಿಂಗ್(ಅಕ್ರಮ ಹಣ ವರ್ಗಾವಣೆ) ಇದ್ದರೆ ಇಡಿ ಬರಬಹುದು. ಆದರೆ ಇಡಿ ತನಿಖೆಯನ್ನು ಯಾರೂ ಕೇಳದಿದ್ದರೂ, ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಇಡಿ ಪ್ರವೇಶ ಮಾಡಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಇಡಿಯನ್ನ ಸೀಳು ನಾಯಿಗೆ ಹೋಲಿಸಿದ ಕೃಷ್ಣಬೈರೇಗೌಡ

ಮುಡಾ ಪ್ರಕರಣದಲ್ಲಿ ಇಡಿ ಎನ್ನುವ ಸೀಳು ನಾಯಿಯನ್ನು ನಮ್ಮ‌ ಮೇಲೆ ಬಿಟ್ಟಿದ್ದಾರೆ. ಇದು ರಾಜಕೀಯ ದಾಳಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡಿ ಅಂದ್ರೆ ಜಾರಿ ನಿರ್ದೇಶನಾಲಯ ಅಲ್ಲ, ಅದು ರಾಜಕೀಯ ಏಜೆನ್ಸಿ. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಲು, ನಾಯಕರ ವಿರುದ್ಧ ದಾಳಿ ಮಾಡೋಕ್ಷೆ ಇರುವ ಜಾಬ್‌ ಎಂದು ದೂರಿದ್ದಾರೆ.

ದೇಶದಲ್ಲಿ ಇಡಿ ಈವರೆಗೆ ಯಾರ ಮೇಲೆ ಕೇಸ್‌ ಹಾಕಿದೆ ಗೊತ್ತಾ? ಕೇವಲ ರಾಜಕೀಯ ವಿರೋಧಿಗಳ ಮೇಲೆ ಮಾತ್ರ. ಇಡಿಯವರು ಶ್ರೀಮಂತರ ಮೇಲೆ, ಅಕ್ರಮ ಹಣ ಸಂಪಾದನೆ ಮಾಡಿದವರ ಮೇಲೆ ಯಾವುದಾದ್ರೂ ಕೇಸ್‌ ಹಾಕಿದ್ದಾರಾ? ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವವರ ಮೇಲೆ ಕೇಸ್‌ ಹಾಕಿದ್ದಾರಾ? ಎಂದು ಕಂದಾಯ ಸಚಿವರು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT