ಬೆಳಗಾವಿ: ವಿಧಾನಸಭೆಯಲ್ಲಿಂದು ಪ್ರತಿಪಕ್ಷ ಬಿಜೆಪಿಯ ಎಲ್ಲಾ ಸದಸ್ಯರು ಸಭಾತ್ಯಾಗ ನಡೆಸಿದಾಗ ಬಿಜೆಪಿಯ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ಪಕ್ಷದ ನಿರ್ಧಾರಕ್ಕೆ ಕ್ಯಾರೆ ಎನ್ನದೇ ಸದನದಲ್ಲಿಯೇ ಕುಳಿತರು.
ವಿಪಕ್ಷ ನಾಯಕ ಆರ್ ಅಶೋಕ್ ವಕ್ಫ್ ವಿಚಾರ ಪ್ರಸ್ತಾಪಿಸಲು ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಿಂದ ಸಭಾತ್ಯಾಗ ನಡೆಸಿದರು. ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿ ಶಾಸಕ ಎನ್. ಮುನಿರತ್ನ ವಿರುದ್ದದ ಪ್ರಕರಣ ಕುರಿತ ಚರ್ಚೆಗೆ ಒತ್ತಾಯಿಸಿದರು.
ಶೂನ್ಯ ವೇಳೆ ಮುಗಿಯುತ್ತಿದ್ದಂತೆಯೇ ಅಶೋಕ್ ವಕ್ಫ್ ವಿಚಾರ ಪ್ರಸ್ತಾಪಿಸಲು ಸ್ಪೀಕರ್ ಯುಟಿ ಖಾದರ್ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ನರೇಂದ್ರ ಸ್ವಾಮಿ, ನಯನಾ ಮೋಟಮ್ಮ ಮತ್ತಿತರ ಶಾಸಕರು, ಮುನಿರತ್ನ ವಿರುದ್ಧದ ಜಾತಿ ನಿಂದನೆ ಹಾಗೂ ಎದುರಾಳಿಗಳಿಗೆ HIV ಸೋಂಕು ತಗಲುವ ಇಂಜೆಕ್ಷನ್ ನೀಡಿಕೆ ಆರೋಪ ಕುರಿತ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದು ಗದ್ದಲ ಎಬ್ಬಿಸಿದರು.
ಈ ಮಧ್ಯೆ ಕಂದಾಯ ಸಚಿವ ಸಚಿವ ಕೃಷ್ಣಬೈರೇಗೌಡ, ರಾಜ್ಯದಲ್ಲಿ ಮಳೆ ಸಂಬಂಧಿತ ಅನಾಹುತ ಕುರಿತು ಸದನದಲ್ಲಿ ಮಾಹಿತಿ ನೀಡಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆಡಳಿತಾರೂಢ ಪಕ್ಷದ ಈ ನಡೆ ವಿರುದ್ಧ ಆಕ್ರೋಶಗೊಂಡ ಅಶೋಕ್ ಮತ್ತಿತರ ಬಿಜೆಪಿ ಶಾಸಕರು ಸದನದಿಂದ ನಿರ್ಗಮಿಸಿದರು. ಬಿಜೆಪಿ ಸದಸ್ಯರು ಹೀಗೆ ಸಭಾತ್ಯಾಗ ಮಾಡುತ್ತಿದ್ದರೂ ಕ್ಯಾರೇ ಎನ್ನದ ಸೋಮಶೇಖರ್ ತಮ್ಮ ಆಸನದಲ್ಲಿಯೇ ಕುಳಿತರು. ಬಳಿಕ ಶಿವರಾಮ್ ಹೆಬ್ಬಾರ್ ಕೂಡಾ ಸೋಮಶೇಖರ್ ಅವರ ಜೊತೆಗೂಡಿದರು.
ಕೆಲವು ದಿನಗಳಿಂದ ಈ ಇಬ್ಬರು ಶಾಸಕರು ಬಿಜೆಪಿಯಿಂದ ಅಂತರ ಕಾಯ್ದುಕೊಂಡು, ಬಂಡಾಯ ಶಾಸಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸೋಮಶೇಖರ್ ಹಾಗೂ ಹೆಬ್ಬಾರ್ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ ಎನ್ನಲಾಗಿದೆ. ಬಳಿಕ ಬಿಜೆಪಿ ಸದಸ್ಯರು ಸದನದಲ್ಲಿ ಪಾಲ್ಗೊಳ್ಳುವ ಮೂಲಕ ವಕ್ಫ್ ವಿಚಾರ ಕುರಿತ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.