ಬೆಂಗಳೂರು: ಸಂಸತ್ ಅಧಿವೇಶನದಲ್ಲಿ ನಾನು ಅಮಿತ್ ಶಾ ಅವರ ಭಾಷಣ ಕೇಳಿದ್ದೇನೆ. ಕೇಂದ್ರ ಗೃಹ ಸಚಿವರ ಭಾಷಣ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್‌ಡಿಡಿ ಪಾಲ್ಗೋಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವದ ಹೆಸರಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತಿದೆ ಎಂದರೆ ದೇಶದ ಜನರು ತಲೆ ತಗ್ಗಿಸಬೇಕು ಹಾಗೆ ಮಾಡ್ತಾರೆ. ಅಧಿವೇಶನದಲ್ಲಿ ನಾನು ಅಮಿತ್ ಶಾ ಭಾಷಣ ಕೇಳಿದ್ದೇನೆ. ಗೃಹ ಸಚಿವ ಅಮಿತ್ ಶಾ ಭಾಷಣ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ಗರಂ ಆದರು.
ಅಟಲ್ ಜೀ ವಿರೋಧ ಪಕ್ಷದಲ್ಲಿ ಇದ್ದಾಗ ನಾನು ಅವರ ಭಾಷಣ ಕಾರಿನಲ್ಲಿ ಹೋಗುವಾಗ ಕೇಳ್ತಿದ್ದೆ. ಅಟಲ್ ಜೀ ಭಾಷಣ ಕೇಳಿ, ನಾನು ವಿರೋಧ ಪಕ್ಷ ನಾಯಕನಾದಾಗ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳುತ್ತಿದ್ದೆ.
ಎಲ್ಲ ರಾಜ್ಯಗಳಲ್ಲಿ ಸುಶಾಸನ ದಿನಾಚರಣೆ ನಡೀತಾ ಇದೆ. ಅನಾರೋಗ್ಯ ಕಾರಣ ಕಾರ್ಯಕ್ರಮಕ್ಕೆ ಬರಲು ಆಗಲ್ಲ ಎಂದಿದ್ದೆ. ಆದ್ರೆ ತುಂಬ ಒತ್ತಾಯ ಮಾಡಿದ ಕಾರಣ ಬಂದೆ. ಅಟಲ್ ಅವರ ಹೆಸರಲ್ಲಿ ನಡೆಯುವ ಕಾರ್ಯಕ್ರಮ ತಪ್ಪಿಸಿಕೊಳ್ಳಬಾರದು ಎಂದು ಬಂದೆ. ಒಂದು ಗಂಟೆಗೂ ಹೆಚ್ಚುಕಾಲ ಸಂತೋಷ್ ಅವರು ಮಾತಾಡಿದ್ದಾರೆ. ಪ್ರಜಾಪ್ರಭುತ್ವ, ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಬಗ್ಗೆ ಮಾತಾಡಿದ್ದಾರೆ. ಅನಾವಶ್ಯಕ ಬಿಜೆಪಿ ಬಗ್ಗೆ ಟೀಕೆ ಮಾಡ್ತಾರೆ, ಆ ಎಲ್ಲ ವಿಷಯದ ಬಗ್ಗೆ ಮಾತಾಡಿದ್ದಾರೆ. ವಾಜಪೇಯಿ ಅವರ ಕೊಡುಗೆ ಬಗ್ಗೆ ಎಳೆಎಳೆಯಾಗಿ ಹೇಳಿದ್ದಾರೆ. ನಾನು ಆಳುವ ಪಕ್ಷದಲ್ಲಿದ್ದೆ, ವಾಜಪೇಯಿ ವಿಪಕ್ಷ ನಾಯಕ ಎಂದು ಮೆಲುಕು ಹಾಕಿದರು.
ಕರ್ನಾಟಕ ವಿಧಾನ ಸಭೆಯಲ್ಲಿ ವಿಪಕ್ಷ ನಾಯಕನಾಗಿ ನಾನು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಲು ವಾಜಪೇಯಿ ಅವರ ಭಾಷಣ ಕೇಳ್ತಿದ್ದೆ. ವಾಜಪೇಯಿ ವಿಪಕ್ಷ ನಾಯಕನಾಗಿ ಹೇಗೆ ನಡೆದುಕೊಂಡ್ರು ಅನ್ನೋದನ್ನ ಎಲ್ಲರು ಓದಬೇಕು. ನಿಮ್ಮ ಹಿಂದಿ ಈ ದೇಶದ ಸಮಸ್ಯೆ ಬಗೆಹರಿಸಲ್ಲ ಎಂದು ನಾನು ಅವರಲ್ಲಿ ತಮಾಷೆ ಮಾಡ್ತಿದ್ದೆ, ಗ್ರೇಟ್ ಮ್ಯಾನ್. ಒಂದು ವೋಟ್‌ನಲ್ಲಿ 13 ತಿಂಗಳ ಸರ್ಕಾರ ಬಿತ್ತು. ಕಾಂಗ್ರೆಸ್‌ನವರು ಮಂತ್ರಿಯಾಗಿದ್ದವರನ್ನ ತಂದು ವೋಟ್ ಮಾಡಿಸಿದ್ದರು ಎಂದು ನೆನಪಿಸಿಕೊಂಡರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತುಗಳನ್ನು ಮೆಚ್ಚಿಕೊಂಡ ದೇವೇಗೌಡ, ಸಂತೋಷ್ ಅವರು ಯಾವುದೇ ಅಧಿಕಾರಕ್ಕೆ ಆಸೆಪಟ್ಟವರಲ್ಲ. ಕೇಂದ್ರ, ರಾಜ್ಯದಲ್ಲಿ ಮಂತ್ರಿ ಆಗಬೇಕು ಎಂದು ಆಸೆಪಟ್ಟವರಲ್ಲ. ನಿಸ್ವಾರ್ಥದಿಂದ ಪಕ್ಷ ಕಟ್ಟುತ್ತಿದ್ದಾರೆ ಎಂದರು.
ಮೊದಲ ಬಾರಿಗೆ ನಿಮ್ಮ ಭಾಷಣ ಕೇಳಿದ್ದೇನೆ. ಪ್ರಜಾಪ್ರಭುತ್ವದ ಬಗ್ಗೆ, ಮೋದಿ, ಶಾ ಅವರ ಬಗ್ಗೆ ಎದುರಾಳಿಗಳು ಮಾತನಾಡುತ್ತಾರೆ. ಅವರ ಮಾತು ಪೊಳ್ಳು. ಅದಕ್ಕೆ ಬೆಲೆ ಇಲ್ಲ ಎನ್ನುವುದನ್ನು ಜನರ ಮನ ಮುಟ್ಟುವಂತೆ ಮಾತಾಡಿದ್ದೀರಿ. ಮೊದಲ ಬಾರಿಗೆ ನಿಮ್ಮ ಜೊತೆ ನಾನು ವೇದಿಕೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಏನು ಶಕ್ತಿ ಇದೆ ಎಂದು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದರು.