ಬೆಂಗಳೂರು: ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ನಡುವೆ ನಡೆದಿದ್ದ ವಿವಾದದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರನ್ನು ಸುಖಾಸುಮ್ಮನೆ ಎಳೆದು ತರದಂತೆ ರಾಜ್ಯದ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರು ರಾಹುಲ್ ಅವರ ಆದೇಶದ ಮೇರೆಗೆ ಸೂಚನೆಗಳನ್ನು ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕತ್ವವು ಈ ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವಂತೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ರಾಹುಲ್ ಗಾಂಧಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕಮಾಂಡ್‌ನ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಡಿ.19ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದ ಕಲಾಪದ ವೇಳ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮಾದಸ ವ್ಯಸನಿ ಎಂದು ಕರೆದಿದ್ದರು. ಇದಕ್ಕೆ ಪ್ರತಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೊಲೆಗಾರ ಎಂದು ಸಿಟಿ ರವಿಯವರನ್ನು ಕೂಗಿದ್ದರು. ಇದರಿಂದ ಸಿಟ್ಟಿಗೆದ್ದ ಸಿಟಿ ರವಿಯವರು ಹೆಬ್ಬಾಳ್ಕರ್ ಅವರನ್ನು ಅಶ್ಲೀಲ ಪದದಲ್ಲಿ ನಿಂದಿಸಿದ್ದರು. ಈ ವಿಚಾರ ಭಾರೀ ವಿವಾದ ಸೃಷ್ಟಿಸಿದೆ.
ಘಟನೆ ನಡೆದ ದಿನವೇ ಪರಿಷತ್ತಿನ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು, ವೇಣುಗೋಪಾಲ್ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದರು. ವೇಣುಗೋಪಾಲ್ ನಂತರ ರಾಹುಲ್ ಅವರೊಂದಿಗೆ ಚರ್ಚಿಸಿದ್ದರು. ಬಳಿಕ ರಾಹುಲ್ ಗಾಂಧಿಯವರ ಹೆಸರನ್ನು ವಿವಾದದಲ್ಲಿ ಎಳೆದು ತರದಂತೆ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ಸೂಚನೆ ನೀಡಿರುವ ಕಾರಣಕ್ಕಾಗಿಯೇ ಹೆಬ್ಬಾಳ್ಕರ್ ಅವರು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ನೀಡಿರುವ ದೂರಿನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರೊಬ್ಬರ ಮೇಲೆ ವಾಗ್ದಾಳಿ ನಡೆಸಿದ್ದಕ್ಕೆ ರವಿಗೆ ಪ್ರತ್ಯುತ್ತರ ನೀಡಿದ್ದೆ ಎಂದು ಹೇಳಿದ್ದು, ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ತಿಳಿದುಬಂದಿದೆ.
ಈ ವಿವಾದದಲ್ಲಿ ರಾಹುಲ್ ಹೆಸರನ್ನು ಎಳೆದು ತರಬಾರದಿತ್ತು ಎಂದು ನಮಗೂ ಅನಿಸುತ್ತದೆ. ಈ ಕುರಿತು ಹೈಕಮಾಂಡ್ ನಿರ್ದೇಶನ ಬರುವಂತೆ ಮಾಡಿದ ಸಲೀಂ ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಪಕ್ಷದ ಎಂಎಲ್‌ಸಿಯೊಬ್ಬರು ಹೇಳಿದ್ದಾರೆ.