ಬೆಳಗಾವಿ: ಬಿಜೆಪಿ ಅನಗತ್ಯ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದು, ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಳಗಾವಿಯ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಿಒಕೆ ಒಳಗೊಳ್ಳದ ಭಾರತದ ನಕ್ಷೆ ಬ್ಯಾನರ್ ಹಾಕಿರುವ ಕುರಿತು ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಯವರು ಪ್ರತಿಕ್ರಿಯೆ ನೀಡಿದರು.
ಕೆಲವು ಖಾಸಗಿ ಕಂಪನಿಗಳು ಈ ಬ್ಯಾನರ್ ಗಳನ್ನು ಹಾಕಿದ್ದು, ಆ ಬ್ಯಾನರ್, ಪೋಸ್ಟರ್ ಗಳನ್ನು ಈಗಾಗಲೇ ತೆಗೆದು ಹಾಕಲಾಗಿದೆ. ಆದರೆ, ಬಿಜೆಪಿ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಹೇಳಿದರು.
ಗಣೇಶ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಲಾಗಿದೆ, ಎಲ್ಲೆಲ್ಲಿ ಫ್ಲೆಕ್ಸ್ ಹಾಕಲಾಗಿದೆ ಎಂಬುದು ಬಿಜೆಪಿಯವರಿಗೆ ತಿಳಿಯುತ್ತದೆ. ಆದರೆ, ಬಿಎಸ್ ಯಡಿಯೂರಪ್ಪ ಅವರ ಪೋಕ್ಸೊ ಪ್ರಕರಣ, ಸಿಟಿ ರವಿ ಅವರ ಅವಹೇಳನಕಾರಿ ಹೇಳಿಕೆಗಳು ಮತ್ತು ಮುನಿರತ್ನ ಅವರ ವಿವಾದಗಳ ಬಗ್ಗೆ ಮಾತ್ರ ತಿಳಿಯದಿರುವುದು ಆಶ್ಚರ್ಯ ತರಿಸುತ್ತದೆ.
ನೈಜ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯಲ್ಲಿ ಕೆಲವರು ಇದ್ದಾರೆ. ಇವರು ಅವರು ದೇಶದ ಆರ್ಥಿಕ ಸ್ಥಿತಿ, ಚೀನಾ ಸಮಸ್ಯೆ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಅಮಿತ್ ಮಾಳವೀಯ ವಿರುದ್ಧ ಕಿಡಿಕಾರಿದ ಅವರು, ಅಮಿತ್ ಮಾಳವೀಯ ಅವರ ಕೆಲಸ ಸುಳ್ಳು ಸುದ್ದಿಗಳನ್ನು ಹರಡುವುದಾಗಿದೆ. ಕರ್ನಾಟಕ ಮತ್ತು ದೇಶದ ಇತರೆಗೆ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿೃ, ಅಮಿತ್ ಮಾಳವೀಯ ಅವರು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ರಾಜ. ಅವರ ಟೈಮ್ ಲೈನ್ ನೋಡಿದರೆ ಗೊತ್ತಾಗುತ್ತದೆ, ಇವರಿಗೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ, ಯಾರದ್ದೋ ನಿರ್ಲಕ್ಷ್ಯದಿಂದ ಭಾರತದ ನಕ್ಷೆಯಲ್ಲಿ ಪಿಒಕೆ ಭೂಭಾಗ ಕಾಣೆಯಾಗಿದೆ. ಇಷ್ಟಕ್ಕೇ ಪ್ರತಿಪಕ್ಷಗಳು ದೊಡ್ಡದಾಗಿ ಬಾಯಿ ಬಡಿದುಕೊಳ್ಳುತ್ತಿವೆ. ಆಗಿರುವ ಪ್ರಮಾದವನ್ನು ಈಗ ಸರಿಪಡಿಸಲಾಗಿದ್ದು, ವಿಪಕ್ಷ ನಾಯಕರು ಈಗಲಾದರೂ ತಮ್ಮ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಕೆಲಸ ಸಿಡಬ್ಲೂಸಿ ಸಭೆಯನ್ನು ಯಶಸ್ವಿಗೊಳಿಸುವುದು, ಪ್ರತಿಪಕ್ಷಗಳ ಕೆಲಸ ನಮ್ಮ ಮೇಲೆ ವಿನಾಕಾರಣ ಟೀಕೆ ಮಾಡುವುದು. ಅವರ ಕೆಲಸ ಅವರು ಮಾಡಲಿ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಅಂತಿಮವಾಗಿ ಯಾರ ಕೆಲಸ ಸರಿ ಎಂಬುದನ್ನು ರಾಜ್ಯದ ಜನತೆ ತೀರ್ಮಾನ ಮಾಡುತ್ತಾರೆ. ಪಿಒಕೆ ಕುರಿತು ಕಾಂಗ್ರೆಸ್ ಪಕ್ಷದ ನಿಲುವೇನು ಎಂಬುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪಿಒಕೆಯೂ ಸೇರಿದಂತೆ ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು, ಕಾಂಗ್ರೆಸ್ ಸರ್ಕಾರಗಳು ಜಾಗತಿಕ ವೇದಿಕೆಯಲ್ಲಿ ಗಟ್ಟಿಯಾಗಿ ಹೇಳಿದ ಇತಿಹಾಸವಿದೆ. ಕಾಂಗ್ರೆಸ್ ಸರ್ಕಾರಗಳು ವಿವಿಧ ಕಾಲಘಟ್ಟದಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಅಸಲಿ ಮುಖವಾಡವನ್ನು ಕಳಚಿರುವ ಸತ್ಯ ಪಾಪ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಗೊತ್ತಿಲ್ಲ ಎಂದು ತಿಳಿಸಿದರು.