ಹಾಸನ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯ ಕ್ಷೇತ್ರ ಬಿಜೆಪಿಗೆ ಸಿಗಲಿದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿರುವ ಸಂಸದ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ ಎಂದಿದ್ದಾರೆ. ಆದರೆ ಯಾರ ಮಾತನ್ನು ನಂಬಬೇಕು ಎಂದು ತಿಳಿಯದ ಎರಡು ಪಕ್ಷದ ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿದ್ದಾರೆ.
ಹಾಸನ ಲೋಕಸಭೆ ಕ್ಷೇತ್ರಕ್ಕೆ ಎನ್‌ಡಿಎ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳು ಬಿಜೆಪಿಗೆ ಸಿಗಬೇಕು ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಭವಿಷ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಬಹುಶಃ ಎರಡೂ ಸ್ಥಾನಗಳನ್ನು ಪಡೆಯಬಹುದು ಎಂದು ಪ್ರಿತಂ ಗೌಡ ಹೇಳಿದ್ದರು.
ಈ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ ಬೇರೆ ಹೇಳಿಕೆ ನೀಡಿದ್ದಾರೆ. ತಮ್ಮ ತಾತ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಬಿಜೆಪಿಯ ಯಾವುದೇ ನಿರ್ದಿಷ್ಟ ನಾಯಕರ ಹೇಳಿಕೆಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯ ಹಲವು ನಾಯಕರು ಕೂಡ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ. ತಮ್ಮ ತಾತ ದೇವೇಗೌಡರ ನಿರ್ದೇಶನದಂತೆ ಈಗಾಗಲೇ ಈ ಭಾಗದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜ್ವಲ್ ಪ್ರವಾಸ ಕೈಗೊಂಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಗೆ ಹಾಸನ ಕ್ಷೇತ್ರ ಬೇಕು ಎಂದಾದರೆ ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡಲಿ: ಬಿಜೆಪಿ ನಾಯಕರ ಬಿಗಿಪಟ್ಟು!
ಉಭಯ ಪಕ್ಷಗಳ ಹಿರಿಯ ನಾಯಕರು ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದು, ನರೇಂದ್ರ ಮೋದಿ ಅವರನ್ನು ಮೂರನೇ ಅವಧಿಗೆ ಮತ್ತೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಆಯ್ಕೆಯಾದ ಅಭ್ಯರ್ಥಿಗಾಗಿ ಶ್ರಮಿಸಲಿದ್ದಾರೆ ಎಂದು ಪ್ರಜ್ವಲ್ ಮಂಗಳವಾರ ಹೇಳಿದ್ದಾರೆ.
ಕುತೂಹಲದ ಸಂಗತಿಯೆಂದರೆ ಜಿಲ್ಲೆಯ ಯಾವೊಬ್ಬ ಹಿರಿಯ ಬಿಜೆಪಿ ನಾಯಕರೂ ಮೈತ್ರಿ ಅಥವಾ ಅಭ್ಯರ್ಥಿ ಬಗ್ಗೆ ಇದುವರೆಗೆ ಗಂಭೀರವಾಗಿಲ್ಲ. ಬಿಜೆಪಿ ಕಾರ್ಯಕರ್ತರು ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂಬ ಪ್ರಜ್ವಲ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಎನ್‌ಡಿಎ ಅಭ್ಯರ್ಥಿ ಯಾರೆಂದು ತಮ್ಮ ಹಿರಿಯ ನಾಯಕರು ಅಧಿಕೃತವಾಗಿ ಘೋಷಿಸುವವರೆಗೆ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಅಥವಾ ಕೆಲಸ ಮಾಡುವುದಿಲ್ಲ ಎಂದು ಹಾಸನ ನಗರ ಬಿಜೆಪಿ ಮಾಜಿ ಅಧ್ಯಕ್ಷ ವೇಣುಗೋಪಾಲ್ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಾನು ಕೇಸರಿ ಶಾಲು ಹಾಕುವುದಿಲ್ಲ, ಕುಮಾರಸ್ವಾಮಿ ಸಹ ಆ ಶಾಲು ಹಾಕಬಾರದಿತ್ತು: ಪುತ್ರನ ನಡೆ ಖಂಡಿಸಿದ ದೇವೇಗೌಡ
ಬಿಜೆಪಿ ನಾಯಕರು ಅಭ್ಯರ್ಥಿ ಘೋಷಣೆಗೂ ಮುನ್ನ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದಾರೆ ಎಂದು ಭರವಸೆ ನೀಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ ಗೌಡ, ಶಾಸಕರಾದ ಎಚ್‌ಕೆ ಸುರೇಶ್, ಸಿಮೆಂಟ್ ಮಂಜು ಅವರೊಂದಿಗೆ ಚರ್ಚಿಸಿ ಹೈಕಮಾಂಡ್ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿದ್ದಾರೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ ಎಂದು ಗೊಂದಲದಲ್ಲಿದ್ದಾರೆ.