ರಾಜಕೀಯ

ಮಂಡ್ಯ ಲೋಕಸಭೆ ಕದನ ಕುತೂಹಲ: ಪ್ರಧಾನಿ ಮೋದಿ ಭೇಟಿಯಾದ ಸಂಸದೆ ಸುಮಲತಾ; ಟಿಕೆಟ್ ಗೆ ಬೇಡಿಕೆ?

Sumana Upadhyaya

ನವದೆಹಲಿ/ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಸಾಕಷ್ಟಿದೆ. ಈಗಾಗಲೇ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಅಂಬರೀಷ್ ಈ ಬಾರಿ ಕೂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಆದರೆ ಮಂಡ್ಯ ಕ್ಷೇತ್ರದ ಟಿಕೆಟ್ ತನಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ನಿಚ್ಛಳವಾಗಿದೆ. ಈಗಾಗಲೇ ಬಿಜೆಪಿ ಮಂಡ್ಯ ಕ್ಷೇತ್ರದ ಸ್ಪರ್ಧೆಯನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ, ಸುಮಲತಾಗೆ ಟಿಕೆಟ್ ಸಿಗುವುದು ಅನುಮಾನ ಎಂಬ ವದಂತಿ ದಟ್ಟವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಲೋಕಸಭೆ ಚುನಾವಣೆ ಸ್ಪರ್ಧಿಗಳ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಸಂಸದೆ ಸುಮಲತಾ ನೇರವಾಗಿ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ತಾವು ಸಂಸದೆಯಾಗಿ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು, ತಮಗೆ ಯಾವ ರೀತಿ ಕ್ಷೇತ್ರದ ಜನರ ಬೆಂಬಲವಿದೆ, ಮಂಡ್ಯ ಜಿಲ್ಲೆಯ ರಾಜಕೀಯ ಚಿತ್ರಣ ಹೇಗಿದೆ ಎಂಬ ಬಗ್ಗೆ ವರಿಷ್ಠರಿಗೆ ಮನದಟ್ಟು ಮಾಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಭಾರೀ ಅಂತರದಿಂದ ಗೆದ್ದು ಸಂಸದೆಯಾದರು. ಈ ಬಾರಿ ಕೂಡ ಮೈತ್ರಿ ಅಭ್ಯರ್ಥಿಯಾಗಿ ನಿಂತರೆ ಖಂಡಿತವಾಗಿಯೂ ಗೆದ್ದು ಬರುತ್ತೇನೆ ಎಂದು ಬಿಜೆಪಿ ವರಿಷ್ಠರಿಗೆ ಭೇಟಿ ಸಂದರ್ಭದಲ್ಲಿ ಮನದಟ್ಟು ಮಾಡುವ ಪ್ರಯತ್ನ ಸುಮಲತಾ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕರ್ನಾಟಕದವರಾದ ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಸುಮಲತಾ ಇಂದು ಸ್ವತಃ ಪ್ರಧಾನಿ ಮೋದಿಯವರನ್ನೇ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಅವರ ಈ ಭೇಟಿಯು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

SCROLL FOR NEXT