ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್ 
ರಾಜಕೀಯ

ನಾಟಿ‌ ಶೈಲಿ ಅಡುಗೆ‌ ಮನೆಯಲ್ಲಿ‌ರಬೇಕು, ಸಂಸತ್‌ಗೆ ಅನ್ವಯವಾಗುವುದಿಲ್ಲ: ಸುಮಲತಾ ಅಂಬರೀಷ್ ಟಾಂಟ್ ಯಾರಿಗೆ?

Shilpa D

ಮಂಡ್ಯ: ನಾಟಿ‌ ಶೈಲಿ ಅಡುಗೆ‌ ಮನೆಯಲ್ಲಿ‌ರಬೇಕು. ಸಂಸತ್‌ಗೆ ಅನ್ವಯವಾಗುವುದಿಲ್ಲ. ಸಂಸದರಾಗುವವರಿಗೆ ನೆಲ, ಜಲ, ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವ ಕನಿಷ್ಠ ಅರ್ಹತೆ ಇರಬೇಕು ಎಂದು ಸಂಸದೆ ಸುಮಲತಾ ಅಂಬರೀಷ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ನಾಟಿ ಬ್ರೀಡ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಅಂಬರೀಷ್ 25 ವರ್ಷವಿದ್ದರು. ಈಗಲೂ ಪರಿಚಯಸ್ಥರಿರುವ ಪಕ್ಷ‌ವದು. ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಹಲವರು ಪಕ್ಷಕ್ಕೆ ಕರೆದಿದ್ದಾರೆ. ಚಲುವರಾಯಸ್ವಾಮಿ ವೈಯಕ್ತಿಕವಾಗಿ ಕೇಳಿದರೆ ಅವರ ಹೆಸರು ಹೇಳುತ್ತೇನೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಮತ ಬಂದಿದ್ದು, ಜಿಲ್ಲೆಯಾದ್ಯಂತ ‌ಪಕ್ಷ ಸಂಘಟನೆಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯೇ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಸುಮಲತಾ ಹೇಳಿದ್ದಾರೆ. ನನಗೇ ಟಿಕೆಟ್ ಕೊಡಬೇಕೆಂದು ಲಾಬಿ ಮಾಡುತ್ತಿಲ್ಲ. ಆದರೆ, ನಾನು ಮಂಡ್ಯದಿಂದಲೇ‌ ಸ್ಪರ್ಧಿಸುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.

ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲು ತಾಂತ್ರಿಕ ಅಡ್ಡಿ ಇರುವ ಬಗ್ಗೆ ಕೇಂದ್ರ ನಾಯಕರು ನನ್ನೊಂದಿಗೆ ಚರ್ಚಿಸಿದ್ದಾರೆ. ಹೀಗಾಗಿ ಬಾಹ್ಯ ಬೆಂಬಲ ಕೊಟ್ಟಿದ್ದೇ‌ನೆ. ಸಂಸದೆಯಾಗಿ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಪರಿಹಾರಕ್ಕೆ ‌ಕೈಲಾದ ಪ್ರಯತ್ನ ಮಾಡಿದ್ದೇನೆ. ನನ್ನ ಸ್ಪರ್ಧೆಯ ಬಗ್ಗೆ ಊಹಾಪೋಹ ಸೃಷ್ಟಿಸಲಾಗುತ್ತಿದೆ. ನಾನಂತೂ ನನ್ನ ಕ್ಷೇತ್ರಕ್ಕೆ ಅಂಟಿಕೊಂಡಿದ್ದೇನೆ, ಬೇರೆಲ್ಲಿಗೂ ಹೋಗುವುದಿಲ್ಲ ಎಂದರು.

‌ಬಿಜೆಪಿ‌ಯ ಸ್ಥಳೀಯ ಮುಖಂಡರ ಜೊತೆ‌ ಸಂಪರ್ಕದಲ್ಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಬಿಜೆಪಿ ಸೇರುವವರೆಗೂ ಪಕ್ಷದ ಸಭೆಗಳಿಗೆ ಹೋಗಲಾಗದು. ಆಹ್ವಾನಿಸಿದ ಸಭೆಗಳಿಗೆ ಹೋಗಿದ್ದೇ‌ನೆ. ಸ್ಥಳೀಯ ನಾಯಕರು ನನ್ನ ಸಂಪರ್ಕದಲ್ಲಿ‌ದ್ದಾರೆ ಎಂದರು.

ಮಂಡ್ಯದೊಂದಿಗೆ ತನಗೆ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ, ಇಲ್ಲಿನ ಜನರ ಋಣ ತನ್ನ ಮೇಲಿದೆ, ಮಂಡ್ಯದಲ್ಲಿರುವಾಗ ಅಂಬರೀಶ್ ತನ್ನ ಜೊತೆ ಇದ್ದಾರೆ, ತನ್ನೊಂದಿಗೆ ಓಡಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ, ಅಂಬರೀಶ್ ಅವರಂತೆಯೇ ತಾನು ಕೂಡ ಮಂಡ್ಯ ರಾಜಕಾರಣದಿಂದ ಅಚೆ ಹೋಗಲಾರೆ ಎಂದು ಸುಮಲತಾ ಹೇಳುತ್ತಾರೆ. ಮೊನ್ನೆ ಅವರ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಈ ಹಿಂದೆಯೂ ಅವರನ್ನು ಭೇಟಿಯಾಗಿದ್ದಾಗಿ ಸುಮಲತಾ ಅಂಬರೀಶ್ ಹೇಳುತ್ತಾರೆ.

SCROLL FOR NEXT