ರಾಜಕೀಯ

ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಯಾರನ್ನು ಬೇಕಾದ್ರೂ ಭೇಟಿಯಾಗಲು ಸಿದ್ಧ: ಎಚ್‌ಡಿಕೆ

Lingaraj Badiger

ಹಾಸನ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲು ನಾನು ಯಾವುದೇ ನಾಯಕರನ್ನು ಸಂಪರ್ಕಿಸಲು ಅಥವಾ ಭೇಟಿ ಮಾಡಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ. 

ಇಂದು ಚಿಕ್ಕಮಗಳೂರಿಗೆ ತೆರಳುವ ಮುನ್ನ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ, ಮಂಡ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಮಂಡ್ಯ ಹಾಲಿ ಸಂಸದೆ ಸುಮಲತಾ ಅವರೊಂದಿಗೂ ಮಾತನಾಡಬಹುದು ಎಂದಿದ್ದಾರೆ.

ವಿ.ಸೋಮಣ್ಣ, ಎಚ್‌.ಡಿ.ದೇವೇಗೌಡ, ಸಿ.ಟಿ.ರವಿ, ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಎಚ್‌ಡಿಕೆ, ಬಿಜೆಪಿ ಮತ್ತು ಜೆಡಿಎಸ್‌ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ ಎಂದರು.

ರಾಜ್ಯದಲ್ಲಿ ಶ್ರೀರಾಮ ಭಕ್ತರಿಗೆ ರಾಮಲಲ್ಲಾ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಮಂತ್ರಾಕ್ಷತೆ(ಪವಿತ್ರ ಅಕ್ಕಿ)ಗೆ ಪಿಡಿಎಸ್ ಅಕ್ಕಿಯನ್ನು ಬಳಸಲಾಗುತ್ತಿದೆ ಎಂದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಅವರು ಮೂರ್ಖತನದ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿ ಸತ್ಯ ಬಹಿರಂಗಪಡಿಸಲಿ ಎಂದರು. 

ಇತ್ತೀಚೆಗಷ್ಟೇ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರ ಮನವೊಲಿಸಲು ಜೆಡಿಎಸ್ ಕೂಡ ಪ್ರಯತ್ನಿಸಲಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

SCROLL FOR NEXT