ರಾಜಕೀಯ

ಲೋಕಸಭಾ ಚುನಾವಣೆ: ಪಕ್ಷದ ಅಭ್ಯರ್ಥಿ ಗೆಲ್ಲಿಸದ ಸಚಿವರ ತಲೆದಂಡ- ಡಾ. ಜಿ.ಪರಮೇಶ್ವರ್

Nagaraja AB

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದ ಸಚಿವರ ತಲೆದಂಡ ಆಗಲಿದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ಕೊಟ್ಟಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಗೆಲ್ಲಲು ಹೈಕಮಾಂಡ್ ಪ್ರತಿ ಸಚಿವರಿಗೆ ಜವಾಬ್ದಾರಿ ನೀಡಿದೆ. ಇದನ್ನು ನಿಭಾಯಿಸದ ಸಚಿವರ ತಲೆ ದಂಡ ಆಗಲಿದೆ ಎಂದು ಹೈಕಮಾಂಡ್ ತಿಳಿಸಿದೆ ಎಂದರು.

ಮುಂಬರುವ ಲೋಕಸಭಾ ಚುನಾವಣೆ ಕುರಿತು ದೆಹಲಿಯಲ್ಲಿ ನಿನ್ನೆ ರಾಜ್ಯದ ಎಲ್ಲ ಸಚಿವರ ಜೊತೆಗೆ ವರಿಷ್ಠರು ನಿನ್ನೆ ಸಭೆ ನಡೆಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಪರಮೇಶ್ವರ್, ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಬಗ್ಗೆ ಮಾತನಾಡಿಲ್ಲ. ನಿರೀಕ್ಷಿತ ಫಲಿತಾಂಶ ಬರದಿದ್ದರೆ ಸಚಿವರ ತಲೆದಂಡ ಆಗಲಿದೆ ಹೈಕಮಾಂಡ್ ಸೂಚಿಸಿರುವುದಾಗಿ ತಿಳಿಸಿದರು.

ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯಕ್ಕೆ ಒಂದೆರಡು ದಿನದಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಸಚಿವರ ಬಗ್ಗೆ ಚರ್ಚೆ ಇನ್ನೂ ಆಗಿಲ್ಲ. ಜವಾಬ್ದಾರಿ ವಹಿಸಿ ಪ್ರಚಾರ ನಡೆಸುವಂತೆ ನಮಗೆ ತಿಳಿಸಲಾಗಿದೆ. ಸುಲಭವಾಗಿ ಗೆಲ್ಲಬಹುದಾದ ಸ್ಥಾನಗಳಲ್ಲಿ ಪಕ್ಷ ಸೋಲನುಭವಿಸಿದರೆ ಆ ಕೆಲಸ ಆಗಿಲ್ಲ ಎಂದು ಭಾವಿಸಲಾಗುವುದು. ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೈಕಮಾಂಡ್ ಹೇಳಿರುವುದಾಗಿ ಸಚಿವರು ಹೇಳಿದರು.

ಲೋಕಸಭೆ ಚುನಾವಣೆ ತಯಾರಿಗಾಗಿ ಎಐಸಿಸಿ ಅಧ್ಯಕ್ಷರು ನಮ್ಮನ್ನೆಲ್ಲ ಕರೆದಿದ್ದರು. ಎಲ್ಲ ರಾಜ್ಯಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ದೇಶದಲ್ಲಿ ಐದು ಕ್ಲಸ್ಟರ್‌ಗಳಿದ್ದು, ಕರ್ನಾಟಕ ಕ್ಲಸ್ಟರ್ ಒಂದರಲ್ಲಿದೆ. ಈ ಹಿಂದೆ ವೀಕ್ಷಕರನ್ನು ನೇಮಿಸಲಾಗುತಿತ್ತು. ಈಗ ಸಂಯೋಜಕರನ್ನು ನೇಮಿಸಲಾಗಿದೆ. ವಾರ್ ರೂಮ್ ನ್ನು ಈಗ ಕನ್ವೆನ್ಶನ್ ಸೆಂಟರ್ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಹಿರಿಯ ನಾಯಕ ಶಶಿಕಾಂತ್ ಸೆಂಥಿಲ್ ಅವರನ್ನು ಸಮನ್ವಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದ್ದು, ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಶ್ಯಕತೆಯಿದೆ. ಕರ್ನಾಟಕದ 28 ಸ್ಥಾನಗಳಿದ್ದು, ಈ ಬಾರಿ ಪಕ್ಷವು ಎಲ್ಲಾ ಸ್ಥಾನಗಳನ್ನು ಗೆಲ್ಲಬೇಕು ಎಂದು ಹೈಕಮಾಂಡ್ ಸೂಚಿಸಿದೆ ಎಂದು ಪರಮೇಶ್ವರ್ ತಿಳಿಸಿದರು. 

SCROLL FOR NEXT