ರಾಜಕೀಯ

ಮತ್ತೊಮ್ಮೆ ಮೋದಿ: ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಲನೆ

Shilpa D

ಬೆಂಗಳೂರು:  2047ಕ್ಕೆ ವಿಕಸಿತ ಭಾರತದ ಸಂಕಲ್ಪವನ್ನು ನರೇಂದ್ರ ಮೋದಿಜೀ ಅವರು ಹೊಂದಿದ್ದಾರೆ. ಅದನ್ನು ಈಡೇರಿಸಲು ಮತ್ತೊಮ್ಮೆ ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

2024ಕ್ಕೆ ಮತ್ತೊಮ್ಮೆ ಮೋದಿ ಎಂಬ ಲೋಕಸಭಾ ಚುನಾವಣೆಯ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೋಮವಾರ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಗೋಡೆ ಬರಹ ಆರಂಭಿಸಲಾಗಿದೆ. ಪ್ರತಿ ಬೂತ್‍ನಲ್ಲಿ 5 ಕಡೆ ಗೋಡೆ ಬರಹಕ್ಕೆ ಚಾಲನೆ ಕೊಡಲಾಗುತ್ತದೆ. 2024ಕ್ಕೆ ಮತ್ತೊಮ್ಮೆ ಮೋದಿ ಎಂಬುದು ದೇಶದ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯ ಮೇರೆಗೆ ಗೋಡೆ ಬರಹ ಅಭಿಯಾನ ಆರಂಭಿಸಿದ್ದೇವೆ. ವಿಕಸಿತ ಭಾರತದ ಸಂಕಲ್ಪದ ಮೂಲಕ ಮೋದಿ ಅವರ ಜನಪರ ಯೋಜನೆಗಳು ಜನರನ್ನು ತಲುಪುತ್ತಿವೆ. ರಾಜ್ಯದ ಜನತೆ ಕೂಡಾ ಬಿಜೆಪಿ ಮತ್ತು ಮೋದಿ ಅವರ ಮೇಲಿನ ಗೌರವದಿಂದ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.

ಹಾವೇರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಈ ವಿಷಯದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ಬೆಳಗಾವಿ, ಹಾವೇರಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ನಾಚಿಕೆಗೇಡಿನ ಸಂಗತಿ’ ಎಂದರು.

‘ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇಂತಹ ಗಂಭೀರ ವಿಷಯಗಳನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಪೊಲೀಸರು ರಾಜ್ಯ ಕಾಂಗ್ರೆಸ್‌ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ದುರ್ದೈವ. ಈ ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರವನ್ನು ಒತ್ತಾಯಿಸಿದ್ದೇವೆ’ ಎಂದು ಹೇಳಿದರು.

SCROLL FOR NEXT