ಬೆಂಗಳೂರು: ಸಿದ್ದರಾಮಯ್ಯ ಹೆಸರಲ್ಲಿ ರಾಮ, ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಒತ್ತಡವೂ ಹಾಕಬೇಕಿಲ್ಲ. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಲ್ಲ ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದಾದ್ಯಂತ ಈಗಾಗಲೇ ಎಲ್ಲಾ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ರಜೆ ಘೋಷಿಸಿವೆ. ಕರ್ನಾಟಕ ರಾಜ್ಯದಲ್ಲೂ ಕೂಡ ನಾಳೆ ರಜೆ ಘೋಷಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಈ ಆಗ್ರಹ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ನಾವು ಭಕ್ತಿ, ಗೌರವ, ಧರ್ಮ ಪ್ರಚಾರಕ್ಕೆ ಮಾಡುವುದಿಲ್ಲ. ದೇಗುಲಗಳಲ್ಲಿ ಏನು ಆಚರಣೆ ಮಾಡಬೇಕು ಮಾಡುತ್ತಾರೆ. ಏನು ಪೂಜೆ, ಪುನಸ್ಕಾರ ಮಾಡಬೇಕು ಅದನ್ನು ಮಾಡುತ್ತೇವೆ. ನಮಗೆ ಯಾರೂ ಹೇಳುವ ಅವಶ್ಯಕತೆ ಇಲ್ಲ. ಪ್ರಾರ್ಥನೆಗಳಿಂದ ಫಲ ದೊರೆಯುತ್ತೆಂಬ ನಂಬಿಕೆ ನಮಗೆ. ಹಾಗಾಗಿ ಪ್ರಾರ್ಥನೆ ಮಾಡ್ಕೊಳ್ಳಿ ಎಂದು ಹೇಳುತ್ತಿದ್ದೇವೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭ: ರಾಜ್ಯದಲ್ಲೂ ನಾಳೆ ರಜೆ ಘೋಷಿಸಿ; ಆರ್ ಅಶೋಕ್ ಅಗ್ರಹ
ಸಿದ್ದರಾಮಯ್ಯ ಹೆಸರಲ್ಲಿ ರಾಮ, ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಹೇಳಿಕೊಡಬೇಕಿಲ್ಲ, ಒತ್ತಡವೂ ಹಾಕಬೇಕಿಲ್ಲ. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಲ್ಲ ಎಂದು ಪರೋಕ್ಷವಾಗಿ ಸರ್ಕಾರಿ ರಜೆ ನೀಡಲು ನಿರಾಕರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಅಂದು ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರಜೆ ನೀಡಬೇಕೆಂಬ ಬಿಜೆಪಿಯ ಮನವಿ ಪತ್ರವನ್ನು ಇನ್ನೂ ನೋಡಿಲ್ಲ. ನೋಡುತ್ತೇನೆ ಎಂದು ಹೇಳಿದ್ದಾರೆ.