ರಾಜಕೀಯ

ನಿಗಮ-ಮಂಡಳಿ ನೇಮಕ ಪಟ್ಟಿ ಸಿದ್ಧಪಡಿಸುವಾಗ ನಮ್ಮ ಅಭಿಪ್ರಾಯ ಕೇಳಿಲ್ಲ: ಜಿ.ಪರಮೇಶ್ವರ್ ಅಸಮಾಧಾನ

Shilpa D

ಬೆಂಗಳೂರು: ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ಸಿದ್ಧಪಡಿಸುವಾಗ ನಮ್ಮ ಯಾವ ಸಚಿವರ ಅಭಿಪ್ರಾಯವನ್ನು ಯಾರೂ ಕೇಳಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ಒಂದೆರಡು ಹೆಸರು ಕೊಡಿ ಎಂದಾಗ ಕೊಟ್ಟಿದ್ದೇವೆ. ಆದರೆ, ನಮ್ಮ ಜತೆ ಮಾತನಾಡಿ ಪಟ್ಟಿ ಮಾಡಿಲ್ಲ ಎಂದರು. ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತದೆ. ಮುಖ್ಯಮಂತ್ರಿ ಹಾಗೂ ಪಕ್ಷದ ‌ಅಧ್ಯಕ್ಷರು ಇದ್ದಾರೆ. ಆಯ್ಕೆ ವಿಚಾರದ ಜವಾಬ್ದಾರಿಯನ್ನು ಅವರಿಗೆ ಬಿಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾ ನಾಯಕರ ಜತೆ ಮಾತನಾಡಿ ಪಟ್ಟಿ ಮಾಡಬೇಕು. ಅದರೆ, ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯವರೇ ಮಾಡುತ್ತಿದ್ದಾರೆ.‌ ಹೀಗಾಗಿ‌ ಪಟ್ಟಿ ಸಿದ್ಧಪಡಿಸುವುದು ನಿಧಾನವಾಗಿದೆ ಎಂದರು.

ನಾನು ಸಹ ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಯಾರೆಲ್ಲ ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

SCROLL FOR NEXT