ರಾಜಕೀಯ

ರಾಹುಲ್ ಗಾಂಧಿ 'ಭಾರತ್ ಜೋಡೋ ನ್ಯಾಯ ಯಾತ್ರೆ'ಗೆ ಅಡ್ಡಿ: ಕಾಂಗ್ರೆಸ್'ನಿಂದ ವಿರೋಧ, ಪ್ರತಿಭಟನೆ

Manjula VN

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೆ ಅಸ್ಸಾಂ ಸರ್ಕಾರ ಅಡ್ಡಿಪಡಿಸಿರುವುದನ್ನು ವಿರೋಧಿಸಿ ರಾಜ್ಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಬೆಂಗಳೂರು ಸೇರಿದಂತೆ ರಾಜ್ಯದಾತ್ಯಂತ ಪ್ರತಿಭಟನೆ ನಡೆಸಿದರು.

ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆಯುವವರು ಯಾವತ್ತಿಗೂ ಭಯ ಪಡಲಾರರು. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ಭಾರತ ಐಕ್ಯತಾ ನ್ಯಾಯ ಯಾತ್ರೆ ಬಿಜೆಪಿಯ ಸರ್ವಾಧಿಕಾರಿ ಸಾಮ್ರಾಜ್ಯದೊಳಗೆ ತಲ್ಲಣ ಸೃಷ್ಟಿಸಿದೆ. ಹೀಗಾಗಿ ಗೂಂಡಾಗಳನ್ನು ಬಿಟ್ಟು ಕಲ್ಲು ಹೊಡೆಸಿ, ಬೆದರಿಕೆ ಒಡ್ಡುವ ಮೂಲಕ ಭಾರತೀಯರ ನ್ಯಾಯದ ಕೂಗನ್ನು ಅಡಗಿಸಬಹುದು ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆ ಪ್ರಧಾನಿ ಮೋದಿ ಅವರೇ, ರಾಹುಲ್ ಗಾಂಧಿ ಅವರ ಜೊತೆ ನಾನಿದ್ದೇನೆ, ನನ್ನಂತಹ ಕೋಟ್ಯಂತರ ಭಾರತೀಯರಿದ್ದಾರೆ. ಅನ್ಯಾಯದ ಕಾಡ್ಗಿಚ್ಚನ್ನು ಆರಿಸಿ, ನ್ಯಾಯದ ಹಣತೆ ಬೆಳಗುವ ವರೆಗೆ ನಾವು ವಿರಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಯಾವುದೇ ಕಾಂಗ್ರೆಸಿಗರು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಯಾತ್ರೆಯನ್ನು ಮುಂದುವರೆಯಲಿದೆ ಎಂದು ತಿಳಿಸಿದರು.

ಬಿಜೆಪಿ ಗೂಂಡಾಗಳು ಅಸ್ಸಾಂನಲ್ಲಿ ಕಳೆದ 2 ದಿನಗಳಿಂದ ರಾಹುಲ್ ಗಾಂಧಿಯವರ ಯಾತ್ರೆಯ ಮೇಲೆ ದಾಳಿ ಮಾಡಿ ತಡೆದಿದ್ದಾರೆ. ಈ ಗೂಂಡಾಗಳು ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಹಿಡಿದಿದ್ದಾರೆ. ಕಾಂಗ್ರೆಸ್ ಸರಕಾರ ಎಲ್ಲ ಧರ್ಮಗಳಿಗೂ ಆದ್ಯತೆ ನೀಡುತ್ತಿದೆ. ಶ್ರೀರಾಮ ಬಿಜೆಪಿಯ ಆಸ್ತಿಯೇ? ರಾಮ ಯಾರ ಸ್ವತ್ತೂ ಅಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿಯವರ ಯಾತ್ರೆ ಅಸ್ಸಾಂನಿಂದ ಗುವಾಹಟಿಗೆ ತೆರಳಲು ಬಿಡುತ್ತಿಲ್ಲ. ಇದರಿಂದ ಆ ರಾಜ್ಯದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬದುಕಿದೆಯೋ, ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಯಾತ್ರೆಗೆ ಅಡ್ಡಿಪಡಿಸಿರುವವರ ವಿರುದ್ಧ ಕ್ರಮ ಕೈಗೊಳ್ಳದ ಅಲ್ಲಿನ ಸರ್ಕಾರದ ನಡೆ ಖಂಡನೀಯ ಎಂದರು.

ರಾಹುಲ್ ಗಾಂಧಿಯವರು ದೇಶದ ಮನಸ್ಸುಗಳನ್ನು ಒಗ್ಗೂಡಿಸಲು, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಅವರಿಗೆ ನ್ಯಾಯ ಒದಗಿಸಲು ಮಣಿಪುರದಿಂದ ಮುಂಬೈವರೆಗೂ 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆಯಿಂದ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿದೆ. ಹೀಗಾಗಿ ಅವರ ಯಾತ್ರೆಯನ್ನು ತಡೆಯುತ್ತಿದ್ದಾರೆ. ಆದರೆ, ರಾಹುಲ್ ಹಾಗೂ ಕಾಂಗ್ರೆಸ್ ನ ಯಾವುದೇ ನಾಯಕರು ಇದಕ್ಕೆ ಜಗ್ಗುವುದಿಲ್ಲ. ರಾಹುಲ್ ತನ್ನ ಅಜ್ಜಿ ಇಂದಿರಾ, ಚಿಕ್ಕಪ್ಪ ಸಂಜಯ್, ತಂದೆ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಚಿಕ್ಕ ವಯಸ್ಸಿನಲ್ಲೇ ನೋಡಿ ದುಃಖ ಅನುಭವಿಸಿದವರು, ಆ ದುಃಖದಲ್ಲೇ ದೇಶದ ಒಗ್ಗಟ್ಟಿಗಾಗಿ ಯಾತ್ರೆ ಮಾಡುತ್ತಿದ್ದಾರೆ. ಅದನ್ನು ನೋಡಿ ಬಿಜೆಪಿಯವರಿಂದ ಸಹಿಸಲು ಆಗುತ್ತಿಲ್ಲ ಎಂದಿದ್ದಾರೆ.

SCROLL FOR NEXT