ರಾಜಕೀಯ

ಜಗದೀಶ್ ಶೆಟ್ಟರ್ ಇಂದೇ 'ಫರ್ ವಾಪಸ್'?, ದೆಹಲಿಯಲ್ಲಿ ಕೇಂದ್ರ ನಾಯಕರ ಭೇಟಿ, ಪುಷ್ಠಿ ನೀಡಿದ ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿಕೆ

Sumana Upadhyaya

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ತವಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಗಳು ಇವೆ. ಇದಕ್ಕೆ ತನ್ನದೇ ಆದ ತಂತ್ರಗಾರಿಕೆ ಹೆಣೆಯುತ್ತಿವೆ. 

ಈ ನಿಟ್ಟಿನಲ್ಲಿ ಕಳೆದ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ತೊರೆದು ಹೋಗಿದ್ದ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ಜೋರಾಗಿ ನಡೆಯುತ್ತಿದೆ. ಅವರಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಇಂದೇ ಬಿಜೆಪಿಗೆ ಶೆಟ್ಟರ್ ವಾಪಸ್?: ಇಂದೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಮಾತೃ ಪಕ್ಷ ಬಿಜೆಪಿ ಸೇರುತ್ತಿದ್ದಾರೆಯೇ ಎಂಬ ವದಂತಿ ದಟ್ಟವಾಗಿದೆ. ಈಗಾಗಲೇ ಅವರು ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ್ದು ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರ ಭೇಟಿಗೆ ಸಹ ಸಮಯ ನಿಗದಿಯಾಗಿದ್ದು ಹೈಕಾಂಡ್ ಕೂಡ ಅವರ ಸೇರ್ಪಡೆಗೆ ಸಮಯ ನಿಗದಿ ಮಾಡಿದೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ಶೆಟ್ಟರ್: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮುಂದಾಳತ್ವದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯ ನಡೆದಿದ್ದು ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬೆಳಗಾವಿಯಿಂದ ಟಿಕೆಟ್ ಗೆ ಶೆಟ್ಟರ್ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಇಂದು ದೆಹಲಿಯಲ್ಲಿ ಹೈಕಮಾಂಡ್ ನ್ನು ಭೇಟಿ ಮಾಡಲು ಯಡಿಯೂರಪ್ಪನವರು ಸಹ ಆಗಮಿಸಿದ್ದಾರೆ. ಪ್ರಸ್ತುತ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದೆ ಮಂಗಳಾ ಅಂಗಡಿಯವರಾಗಿದ್ದು ಅವರು ಶೆಟ್ಟರ್ ಅವರಿಗೆ ಸಂಬಂಧದಲ್ಲಿ ಬೀಗತಿಯಾಗಿದ್ದಾರೆ. 

ಪುಷ್ಠಿ ನೀಡಿದ ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿಕೆ: ಪಕ್ಷದಿಂದ ಯಾರೆಲ್ಲ ದೂರವಾಗಿದ್ದಾರೋ ಅವರನ್ನು ವಾಪಸ್‌ ಕರೆ ತರುವ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಕರೆ ತಂದು ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುವ ಕೆಲಸ ಮಾಡುತ್ತೇವೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಜತೆ ಹೈಕಮಾಂಡ್ ನಾಯಕರು ಮಾತನಾಡುತ್ತಾರೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯನ್ನು ಗೆಲ್ಲುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಕ್ಷ ತೊರೆದ ನಾಯಕರನ್ನು ವಾಪಸ್‌ ಕರೆತರುವ ಕೆಲಸ ಆಗುತ್ತಿದೆ. ಇನ್ನು ಜಗದೀಶ್‌ ಶೆಟ್ಟರ್‌ ಅವರ ಜತೆ ಬಿಜೆಪಿ ಹೈಕಮಾಂಡ್‌ ಮಾತನಾಡಲಿದೆ ಎಂದು ಹೇಳಿದರು.

SCROLL FOR NEXT