ರಾಜಕೀಯ

ಜೆಡಿಎಸ್-ಬಿಜೆಪಿ ಮುದ್ದಾಟ, 'ಸ್ವಾಭಿಮಾನಿ' ಸಂಸದೆಗೆ ಸಂಕಟ: ಸ್ಪರ್ಧಿಸಿದರೆ ಮಂಡ್ಯದಿಂದ ಮಾತ್ರ-ಸುಮಲತಾ ಹಠ!

Shilpa D

ಬೆಂಗಳೂರು: ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ನಡುವೆ  ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಗುರುವಾರ ತಮ್ಮ ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಮಂಡ್ಯವನ್ನು ಎಂದಿಗೂ ಬಿಡುವುದಿಲ್ಲ. ಬಿಜೆಪಿನೇ ಮಂಡ್ಯ ಸೀಟು ಉಳಿಸುಕೊಳ್ಳುತ್ತೆ ಅನ್ನೋ ನಂಬಿಕೆ ನನಗೆ ಇದೆ. ಬಿಜೆಪಿ ಹೈಕಮಾಂಡ್ ನನ್ನ ಬಳಿ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ. ನಾನು ಭರವಸೆಯಿಂದ ಹೇಳ್ತೀನಿ. ಬಿಜೆಪಿ ಮಂಡ್ಯ ಸೀಟು ಉಳಿಸಿಕೊಳ್ಳುತ್ತೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಒಂದು ವೇಳೆ ಆ ರೀತಿ ಆಗದಿದ್ದರೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಇಲ್ಲದಿದ್ದರೇ ಕಾಂಗ್ರೆಸ್ ಪ್ರಸ್ತಾಪವನ್ನು ಪರಿಗಣಿಸುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದಿಂದ ತಮಗೆ ಆಹ್ವಾನವಿದೆ ಎಂಬುದನ್ನು ಸುಮಲತಾ ಒಪ್ಪಿಕೊಂಡಿದ್ದಾರೆ.

ರಾಜಕೀಯ ನನಗೆ ಅನಿವಾರ್ಯವಲ್ಲ, ಆದರೆ ನಾಲ್ಕು ಚುನಾವಣೆಗಳಲ್ಲಿ ಭಾರೀ ಅಂತರದಿಂದ ಗೆದ್ದ ನನ್ನ ಪತಿ ಅಂಬರೀಶ್ ಅವರ ಪರಂಪರೆಯನ್ನು ನಾನು ಮುಂದುವರಿಸಬೇಕಾಗಿದೆ. ನಾನೂ ಕೂಡ ಮಂಡ್ಯ ಜನತೆಯ ಪ್ರೀತಿಯಿಂದ ಉತ್ತಮ ಅಂತರದಿಂದ ಗೆದ್ದಿದ್ದೇನೆ. ನಾನು ಬೇರೆ ಕ್ಷೇತ್ರಕ್ಕೆ ಬದಲಾದರೆ ಅದು ಅರ್ಥಹೀನ. ಹಾಲಿ ಸಂಸದರನ್ನೇ ಟಿಕೆಟ್‌ಗೆ ಪರಿಗಣಿಸಬೇಕು ಎಂಬುದು ಎಲ್ಲಾ ರಾಜಕೀಯ ಪಕ್ಷಗಳ  ರೂಢಿಯಾಗಿದ್ದು, ಬಿಜೆಪಿ ಸ್ಥಾನವನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ  ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮಾಜಿ ಸಚಿವ ಡಾ.ನಾರಾಯಣಗೌಡ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಬಿಜೆಪಿಗೆ ಬಿಟ್ಟುಕೊಡಬೇಕು, ಲೋಕಸಭೆ ಕ್ಷೇತ್ರದಲ್ಲಿ 1.85 ಲಕ್ಷಕ್ಕೆ ತಲುಪಿರುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮತಗಳಿಕೆಯನ್ನು ಸುಧಾರಿಸಿಕೊಂಡು ಇಲ್ಲಿ ಬೆಳೆಯುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಮೇಡಂ (ಸುಮಲತಾ) ಅವರು ಮಂಡ್ಯದಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿಯ ಸಾಧನೆಗಳು ಮತ್ತು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಿಂದಾಗಿ ಅವರ ಗೆಲುವು ಶೇಕಡಾ 1,000 ರಷ್ಟು ಖಚಿತವಾಗಿದೆ ಎಂದು ಹೇಳಿದರು.

2019 ರಲ್ಲಿ, ಸುಮಲತಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿದರು ಮತ್ತು ಬಿಜೆಪಿ ತನ್ನ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಅಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಸೋಲಿಸಿದರು. ಕೆಲವು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ವಿಶೇಷವಾಗಿ ಅಂಬರೀಷ್ ಅಭಿಮಾನಿಗಳು ಸಹ ಅವರಿಗೆ ಬೆಂಬಲ ನೀಡಿದ್ದರು.

ಇತ್ತೀಚಿನ ವಿಧಾನಸಭಾ ಚುನಾವಣೆಗೆ ಮುನ್ನ, ಅವರು ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಮಂಡ್ಯದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಬೆಂಬಲವನ್ನು ನೀಡಿದರು. ಇದೀಗ ಬಿಜೆಪಿ ಜೊತೆಗಿನ ಮೈತ್ರಿಯ ಭಾಗವಾಗಿ ಜೆಡಿಎಸ್ ಗೆ ಮೂರು ಸ್ಥಾನ  ಬಿಟ್ಟು ಕೊಡಲು ನಿರ್ಧರಿಸಲಾಗಿದೆ.  ತನ್ನ ಅಭ್ಯರ್ಥಿಗಳಿಗೆ ಗೆಲುವು ಖಚಿತ ಎಂದು ಜೆಡಿಎಸ್ ಆಂತರಿಕ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ.  ಮೂಲಗಳ ಪ್ರಕಾರ ಕುಮಾರಸ್ವಾಮಿ ಕೂಡ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲು ಬಯಸಿದ್ದಾರೆ.

SCROLL FOR NEXT