ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ 
ರಾಜಕೀಯ

ವಿಧಾನಸಭೆಯಲ್ಲಿ ಸಚಿವರ ಗೈರು: ಪ್ರತಿಪಕ್ಷಗಳ ಶಾಸಕರಿಂದ ಕೆಲಕಾಲ ಸಭಾತ್ಯಾಗ

ವಿಧಾನಸಭೆ ಅಧಿವೇಶ ಆರಂಭವಾಗುತ್ತಿದ್ದಂತೆಯೇ ಎದ್ದುನಿಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸಚಿವರಿಲ್ಲ ಎಂದು ಆಕ್ಷೇಪವೆತ್ತಿದರು.

ಬೆಂಗಳೂರು: ವಿಧಾನಸಭೆಯ ಕಲಾಪ ಆರಂಭದಲ್ಲಿ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಸಚಿವರಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಶಾಸಕರು ಕೆಲಕಾಲ ಸಭಾತ್ಯಾಗ ಮಾಡಿದರು.

ನಿನ್ನೆ ಬೆಳಿಗ್ಗೆ ವಿಧಾನಸಭೆ ಸಮಾವೇಶಗೊಂಡ ಕೂಡಲೇ ಎದ್ದುನಿಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸಚಿವರಿಲ್ಲ ಎಂದು ಆಕ್ಷೇಪವೆತ್ತಿದರು.

ಮತ್ತೊಬ್ಬ ಬಿಜೆಪಿ ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಮೊದಲ ಸಾಲಿನಲ್ಲಿ ಯಾವ ಸಚಿವರೂ ಇಲ್ಲ. ಶೂನ್ಯವಿದೆ. 9.45 ನಿಮಿಷಕ್ಕೆ ನಾವು ಬಂದಿದ್ದೇವೆ. ಅಧಿವೇಶನ ಚೆನ್ನಾಗಿ ನಡೆಯಬೇಕು. ಹೊಸ ನಿಯಮ ಜಾರಿಗೆ ತಂದಿದ್ದೀರಿ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಅಧಿವೇಶನ ಸುಗಮವಾಗಿ ನಡೆಯಬೇಕು ಎಂದು ಹೊಸ ನಿಯಮ ತಂದಿದ್ದೀರಿ. ಆಡಳಿತ ಪಕ್ಷ ಮಾದರಿಯಾಗಬೇಕು. ಇದು ಯಾವ ರೀತಿ ಮಾಡೆಲ್‌ ಆಗಿದ್ದಾರೆ ನೋಡಿ. ಸಚಿವರಿಲ್ಲ. ಹೀಗಾಗಿ ಸದನದ ಕಲಾಪವನ್ನು 10 ನಿಮಿಷ ಮುಂದೂಡಿ, ಆಡಳಿತ ಪಕ್ಷದವರು ಬುದ್ಧಿ ಕಲಿಯಲಿ. ವಿಧಾನಸಭೆಯಲ್ಲಿ ಹಾಜರಿರಬೇಕಾದ ಸಚಿವರ ಹೆಸರನ್ನು ಓದಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಅವರನ್ನು ಆಗ್ರಹಿಸಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್ಣ ಮಾತನಾಡಿ, ಶಾಸಕರಿಗೆ ವಿಪ್‌ ನೀಡಲಾಗಿದೆ. ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಹೇಳಲು ಮುಂದಾದರು. ಆಗ ಅಶೋಕ್‌, ರಾಜೀನಾಮೆ ಕೊಟ್ಟು ನೀವು ಮಂತ್ರಿಯಾಗಿ ಎಂದು ಛೇಡಿಸಿದರು.

ಮತ್ತೆ ಮಾತು ಮುಂದುವರೆಸಿದ ಬಸನಗೌಡ ಪಾಟೀಲ್‌ ಯತ್ನಾಳ್‌, ಗಂಭೀರವಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸುತ್ತೇವೆ, ಮುಖ್ಯಮಂತ್ರಿಗಳಿಲ್ಲ, ಸಚಿವರಿಲ್ಲ ಅವರಿಗೆ ನೈತಿಕ ಹೊಣೆ ಇಲ್ಲ. ಇ.ಡಿ ಪತ್ರಿಕಾ ಹೇಳಿಕೆ ನೀಡಿದೆ ನೋಡಿ ಎಂದು ಪ್ರದರ್ಶಿಸಿದರು.

ಅಷ್ಟರಲ್ಲಿ ಸದನಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ನಾವು ಮೂರ್ನಾಲ್ಕು ಸಚಿವರಿದ್ದೇವೆ. ಅವರು ಚರ್ಚೆ ಮಾಡಲಿ. ಸರ್ಕಾರ ಉತ್ತರ ನೀಡುತ್ತದೆ ಎಂದರು.

ಮತ್ತೆ ಅಶೋಕ್‌ ಮಾತನಾಡಿ, ಕೋಟ್ಯಂತರ ರೂ. ಅಧಿವೇಶನಕ್ಕಾಗಿ ಖರ್ಚಾಗುತ್ತದೆ. ಶಾಸಕರ ಊಟ, ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಇವರಿಗೆ ಏನು ದಾಡಿ ಬಂದಿದೆ. ಬೇಜವಾಬ್ದಾರಿಯಿಂದ ಸರ್ಕಾರ ನಡೆದುಕೊಳ್ಳುತ್ತಿದೆ. ಇದನ್ನು ಪ್ರತಿಭಟಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೊರನಡೆದರು. ಜೆಡಿಎಸ್‌‍ ಶಾಸಕರೂ ಕೂಡ ಅವರನ್ನು ಹಿಂಬಾಲಿಸಿ ಸದನದಿಂದ ಹೊರನಡೆದರು.

ಆಗ ಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ವಿಪ್‌ ಅವರೇ ಎಲ್ಲಿದ್ದೀರಾ?, ಮನೆಯಲ್ಲಿದ್ದೀರಾ? ಅಥವಾ ಅಸೆಂಬ್ಲಿಯಲ್ಲಿದ್ದೀರಾ?, ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಚಿವರಿಲ್ಲದೇ ಇರುವುದು ತಪ್ಪು. ಅರ್ಥ ಮಾಡಿಕೊಳ್ಳಬೇಕು. ಪ್ರತಿಪಕ್ಷದವರ ಆಗ್ರಹದಲ್ಲಿ ತಪ್ಪು ಇಲ್ಲ. ಮಂತ್ರಿಗಳಿಂದ ಕೆಟ್ಟ ಹೆಸರು ಬರುತ್ತದೆ ಎಂದರು.

ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಶಾಸಕ ರಾಜು ಕಾಗೆ, ನಮ ಕ್ಷೇತ್ರದವರು ಭೇಟಿಯಾಗಲು ಬಂದಿರುತ್ತಾರೆ. ಅವರನ್ನು ಮಾತನಾಡಿಸಿ ಬರಲು ತಡವಾಗುತ್ತದೆ. ನೀವು ಅಧಿವೇಶನವನ್ನು 9.30ಕ್ಕೆ ಕರೆದರೆ ತೊಂದರೆಯಾಗುತ್ತದೆ. 11 ಗಂಟೆಗೆ ಆರಂಭಿಸಿದರೆ ಅನುಕೂಲ. ನೀವು 7 ಗಂಟೆಗೆ ಕರೆದರೂ ಬರುತ್ತೇವೆ. ಸಂಜೆ ವೇಳೆ ಶಾಸಕರು ಭೇಟಿಗೆ ಅವಕಾಶ ಮಾಡಿಕೊಟ್ಟರೆ ಅನುಕೂಲ ಎಂದರು.

ಮತ್ತೆ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್‌, ವಿಧೇಯಕಗಳಿವೆ. ವಿಧೇಯಕಗಳ ಚರ್ಚೆಯಾಗಬೇಕು, ಕಾರ್ಯಕಲಾಪಗಳ ಪಟ್ಟಿ ಮುಗಿಸಬೇಕು, ಸಚಿವರಿಗೂ ಜವಾಬ್ದಾರಿ ಇರಬೇಕು, ಅಧಿವೇಶನ ನಡೆಸುವ ವೇಳೆ ಸಭೆಗಳನ್ನು ನಡೆಸಬಾರದು, ಅಧಿವೇಶನಕ್ಕೆ ತಡವಾಗಿ ಬರುವುದು ಸರಿಯಲ್ಲ. ಮಂತ್ರಿಗಳು ಸರಿಯಾದ ಸಮಯಕ್ಕೆ ಬಂದರೆ ಶಾಸಕರು ಬರುತ್ತಾರೆ. ಅಧಿವೇಶನದ ಸಂದರ್ಭದಲ್ಲಿ ಬೆಳಿಗ್ಗೆ ಸಭೆ ನಡೆಸುವುದು ಸರಿಯಲ್ಲ. ಆ ಕಾರಣಕ್ಕೆ ಬೆಳಿಗ್ಗೆ 9.30ಕ್ಕೆ ಅಧಿವೇಶನವನ್ನು ಆರಂಭಿಸುತ್ತಿದ್ದೇವೆ.

ಸಚಿವರು ಕಚೇರಿಯಲ್ಲಿದ್ದರೆ ಜನರೂ ಭೇಟಿಯಾಗಲು ಬರುತ್ತಾರೆ. ಸರ್ಕಾರಕ್ಕೆ ಒಂದು ವರ್ಷ ಕಳೆದಿದೆ. ಇನ್ನಾದರೂ ಇದು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT