ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣವನ್ನು 'ವಿವಾದ ಅಲ್ಲ' ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತಮ್ಮನ್ನು ವೈಯಕ್ತಿಕವಾಗಿ ಗುರಿಯಾಗಿಸಿ ತಮ್ಮ ವರ್ಚಸ್ಸು ಹಾಳು ಮಾಡಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ವಿವಾದವಲ್ಲದ ವಿಷಯವನ್ನು ಉದ್ದೇಶ ಪೂರ್ವಕವಾಗಿ ವಿವಾದ ಮಾಡುತ್ತಿದ್ದೀರಿ. ಮುಡಾದಿಂದ ನಿವೇಶನ ಪಡೆಯುವಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾನೂನು ಪ್ರಕಾರವೇ ನಡೆದಿದೆ. ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿರುವುದನ್ನು ಬಲವಾಗಿ ಖಂಡಿಸುತ್ತೇನೆ. ನನ್ನ ವರ್ಚಸ್ಸು ಹಾಳು ಹಾಡಲು ಯತ್ನಿಸುತ್ತಿದ್ದೀರಿ ಎಂದು ಕಿಡಿಕಾರಿದರು.
ಮುಡಾದಿಂದ ಸ್ವಾಧೀನಪಡಿಸಿಕೊಂಡಿರುವ ಅವರ ಜಮೀನಿಗೆ ಹೋಲಿಸಿದರೆ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಪ್ರದೇಶದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಪರ್ಯಾಯ ಸೈಟ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿದ್ದರಾಮಯ್ಯ ಅವರ ಹಲವಾರು ಬೆಂಬಲಿಗರು ಸಹ ಲಾಭ ಪಡೆದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. 2021ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು.
ನಿಮ್ಮ ತಪ್ಪಿಗಾಗಿ ಮುಡಾ ನನಗೆ ನಿವೇಶನ ನೀಡಿದೆ. ಈ ವಿಷಯದ ಬಗ್ಗೆ ಚರ್ಚೆಗೆ ಮಹತ್ವ ಇಲ್ಲ. ಮುಡಾ ತನ್ನ ಪತ್ನಿಗೆ ಸೇರಿದ ಜಮೀನನ್ನು ಅಕ್ರಮವಾಗಿ ಪಡೆದು ಆಕೆಯ ಅನುಮತಿಯಿಲ್ಲದೆ ಬಡಾವಣೆ ನಿರ್ಮಿಸಿ ಜನರಿಗೆ ಮಾರಾಟ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.