ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ಕ್ಲೀನ್ ಇಮೇಜ್ ಫ್ಯಾಕ್ಟರ್ ಅವರ ನಿದ್ದೆಗೇಡಿಸಿದೆ ಎಂದು ಶುಕ್ರವಾರ ಹೇಳಿದ್ದಾರೆ.
“ಅವರ (ದೇವೇಗೌಡ ಮತ್ತು ಕುಮಾರಸ್ವಾಮಿ) ಕುಟುಂಬದ ಆಸ್ತಿ ಬಗ್ಗೆ ನಾನು ಮಾತನಾಡಲಾರೆ. ಅವರ ನಿಖರವಾದ ಆಸ್ತಿ ಎಷ್ಟು, ಆಳ ಅಥವಾ ವಿಸ್ತಾರವನ್ನು ನಾನು ಸೇರಿದಂತೆ ಯಾರಿಗೂ ತಿಳಿಯಲು ಸಾಧ್ಯವಿಲ್ಲ. ಆದರೆ ನನ್ನ ಕ್ಲೀನ್ ಇಮೇಜ್ ಫ್ಯಾಕ್ಟರ್ ಅವರ ನಿದ್ದೆಗೇಡಿಸುತ್ತಿದೆ. ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
"ಊಳಿಗಮಾನ್ಯವಾದಿಗಳು, ಹಿಟ್ಲರ್-ಮನಸ್ಸಿನ ಜನರೊಂದಿಗೆ ಸೇರಿಕೊಂಡು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಇಬ್ಬರೂ ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಅದನ್ನು ಮಾಡಲಿ. ನನ್ನ ಜೀವಿತಾವಧಿಯಲ್ಲಿ ಇಂತಹ ಹಲವು ಪಿತೂರಿಗಳನ್ನು ಎದುರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
'ಮಾರ್ಚ್ 17, 2011 ರಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೈಸೂರಿನಲ್ಲಿ ಮುಡಾದಿಂದ 60,000 ಚದರ ಅಡಿ ಜಾಗವನ್ನು ಮಂಜೂರು ಮಾಡುವ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಅಂದಿನ ಸಭಾಪತಿಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದರು. ಎಚ್‌ಡಿ ದೇವೇಗೌಡರು ನಿಯಮಗಳನ್ನು ಉಲ್ಲಂಘಿಸಿ ತಮ್ಮ ಕುಟುಂಬಕ್ಕೆ 48 ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬುದಕ್ಕೆ ಯಡಿಯೂರಪ್ಪ ಸಾಕ್ಷಿ ಒದಗಿಸಿದ್ದರು. ಅದು ದಾಖಲೆಯಲ್ಲಿದೆ' ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
"ಹೆಚ್ಚುವರಿಯಾಗಿ, ಕುಮಾರಸ್ವಾಮಿ ಅವರಿಗೆ ನವೆಂಬರ್ 7, 1984 ರಂದು ಸಿಐಟಿಬಿ ಮೈಸೂರಿನಿಂದ ಒಟ್ಟು 21,000 ಚದರ ಅಡಿಗಳ ಕೈಗಾರಿಕಾ ಪ್ಲಾಟ್ ಅನ್ನು ಮಂಜೂರು ಮಾಡಲಾಗಿತ್ತು. ಪ್ರತಿ ಚದರ ಯಾರ್ಡ್‌ಗೆ 16 ರೂ ದರದಲ್ಲಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ಲಾಟ್ ಅನ್ನು ಕೈಗಾರಿಕಾ ಉಪನಗರ 3ನೇ ಹಂತದಲ್ಲಿ 37,334. ರೂ. ನೀಡಲಾಗಿತ್ತು ಮತ್ತು ಅಲ್ಲಿ ಎರಡು ವರ್ಷಗಳೊಳಗೆ ಕೈಗಾರಿಕೆ ಆರಂಭಿಸಬೇಕು ಎಂದು ಅನುಮೋದನೆ ಪತ್ರದಲ್ಲಿ ಷರತ್ತು ವಿಧಿಸಲಾಗಿದೆ. 1985ರಲ್ಲಿ ಕುಮಾರಸ್ವಾಮಿ ಅವರಿಗೆ ಹಂಚಿಕೆ ಪತ್ರ ನೀಡಲಾಗಿತ್ತು. ಆದರೆ ಕುಮಾರಸ್ವಾಮಿ ಅವರು ಕೈಗಾರಿಕೆ ಸ್ಥಾಪಿಸಲಿಲ್ಲ ಎಂದು ಸಿಎಂ ತಿಳಿಸಿದರು.
ಕೈಗಾರಿಕಾ ನಿವೇಶನವನ್ನು ಬೇರೆಯವರಿಗೆ ನೀಡಿದ್ದರೆ ಅಲ್ಲಿ ಕೈಗಾರಿಕೆ ಸ್ಥಾಪನೆಯಾಗಿ ಉದ್ಯೋಗಾವಕಾಶ ಸೃಷ್ಟಿಸಿ ಸರ್ಕಾರಕ್ಕೆ ಆದಾಯ ಬರುತ್ತಿತ್ತು. ಆದರೆ ಕುಮಾರಸ್ವಾಮಿ ಇದನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಇದಲ್ಲದೆ, ಫೆಬ್ರವರಿ 18, 2017 ರಂದು, ಅವರು ಪರ್ಯಾಯ ಸೈಟ್ ಗಾಗಿ ಮುಡಾ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಜನವರಿ 7, 2023 ರಂದು, ಮುಡಾ ಅವರಿಗೆ ಪರ್ಯಾಯ ನಿವೇಶನ ನೀಡಲು ನಿರ್ಧರಿಸಿತು. ಆದರೆ, ಅದೇ ಭೂಮಿಯನ್ನು ಅತಿಕ್ರಮಿಸಿದ ಇನ್ನೊಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರು. ಇಷ್ಟೆಲ್ಲ ಅಕ್ರಮಗಳು ಆಗಿದ್ದರೂ ಕುಮಾರಸ್ವಾಮಿ ತತ್ವ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆ' ಎಂದು ಸಿಎಂ ವಾಗ್ದಾಳಿ ನಡೆಸಿದರು.
ಇನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎಬಿವಿಪಿ ಬಡಾವಣೆಯಲ್ಲಿ 1,305 ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಲಾಗಿದೆ. ಈ ಪೈಕಿ 807 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ದೊಡ್ಡ ಮಟ್ಟದ ಹಗರಣ ನಡೆದಿದೆ. ಈ ಕುರಿತು 2020ರಲ್ಲೇ ಸರ್ಕಾರಕ್ಕೆ ಲೋಕಾಯುಕ್ತ ವರದಿ ಸಲ್ಲಿಕೆಯಾಗಿದ್ದು, ಈ ಬಗ್ಗೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.