ನಿರ್ಮಲಾ ಸೀತಾರಾಮನ್ 
ರಾಜಕೀಯ

ಬಜೆಟ್​ನಲ್ಲಿ ಕರ್ನಾಟಕಕ್ಕೆ ಚೊಂಬು: ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕರ್ನಾಟಕ ಸರ್ಕಾರ ಎಲ್ಲದರಲ್ಲೂ ತೆರಿಗೆ ಹೆಚ್ಚಿಸಿದೆ. ದರ ಕೂಡ ಹೆಚ್ಚಳ ಆಗುತ್ತಿದೆ. ಸಹಜವಾಗಿ ಹಣದುಬ್ಬರ ಎದ್ದು ಕಾಣುತ್ತಿದೆ. ಕಂಪನಿಗಳು ಹೊರ ರಾಜ್ಯಕ್ಕೆ ಹೋಗುತ್ತಿವೆ. ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ. ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬರುತ್ತಿಲ್ಲ.

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ಕಾಂಗ್ರೆಸ್ ನಾಯಕರ ವಿರುದ್ಧ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ​ ಸುಳ್ಳು ಹೇಳುತ್ತಿದೆ. ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ 81,791 ಕೋಟಿ ರೂ. ನೀಡಿತ್ತು. ಆದರೆ, 2014ರಿಂದ ಇಲ್ಲಿಯವರೆಗೆ ಎನ್​ಡಿಎ ಸರ್ಕಾರ 2,95,818 ಕೋಟಿ ರೂಪಾಯಿ ನೀಡಿದೆ. ಕಳೆದ 10 ವರ್ಷದಲ್ಲಿ 2,36,955 ಕೋಟಿ ತೆರಿಗೆ ಹಂಚಿಕೆಯಾಗಿದೆ ಎಂದು ಹೇಳಿದರು.

ಬಜೆಟ್​ನಲ್ಲಿ ಸ್ಟಾರ್ಟ್​ಅಪ್​ಗಳಿಗೆ ನಾವು ಹೆಚ್ಚಿನ‌ ಒತ್ತು ನೀಡಿದ್ದೇವೆ. ಕೇಂದ್ರ ಬಜೆಟ್​ನಲ್ಲಿ ಯುವಕರಿಗೆ ಮೂರು ಯೋಜನೆ ತಂದಿದ್ದೇವೆ. ಯುವಕರಿಗೆ ತರಬೇತಿ, ಇಂಟರ್ನ್​ಶಿಪ್ ಯೋಜನೆ, ಕೌಶಲ್ಯಾಭಿವೃದ್ಧಿ ನೀಡಲಾಗುವುದು. ಎಂಎಸ್ಎಮ್ಇಗಳಿಗೆ ಸ್ವಲ್ಪ ಸಮಸ್ಯೆ ಆಗುತ್ತಿದೆ, ಆ ಸಮಸ್ಯೆ ಬಗೆಹರಿಸಲು ಕೇಂದ್ರ ಬಜೆಟ್​ನಲ್ಲಿ ಉತ್ತರ ನೀಡಿದ್ದೇವೆ. ಬಾಹ್ಯಾಕಾಶ ವಲಯಕ್ಕೆ ಬೆಂಗಳೂರಿನ ಕೊಡುಗೆ ಇದೆ. ಆವಾಸ್ ಯೋಜನೆಯಡಿ ಬಡ ವರ್ಗದ ಜನರಿಗೆ ಮನೆ ನೀಡಲಾಗುತ್ತಿದೆ. ಮಹಿಳೆಯರು, ಕೃಷಿ ವಲಯಕ್ಕೂ ಕೇಂದ್ರದಿಂದ ಯೋಜನೆ ತಂದಿದ್ದೇವೆ. ಈ ಎಲ್ಲ ಯೋಜನೆಗಳ ಪ್ರಯೋಜನ ಕರ್ನಾಟಕವೂ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ಪೀಣ್ಯದಲ್ಲಿ ಸಣ್ಣ ಕೈಗಾರಿಕೆಗಳಿವೆ. ಕೃಷಿ ವಲಯದ ವಿಸ್ತರಣೆಗೆ ಬೆಂಗಳೂರು ಕೊಡುಗೆ ಇದೆ. ಕಲಬುರಗಿಯಲ್ಲಿ ಪಿಎಂ ಮಿತ್ರಾ ಪಾರ್ಕ್‌ ನಿರ್ಮಾಣವಾಗಲಿದೆ. ರೈಲ್ವೇ ವಲಯಕ್ಕೂ ಕೋಟಿ ಕೋಟಿ ಹಣ ನೀಡಿದ್ದೇವೆ. 825 ಕೋಟಿ ರೂ. ಅನುದಾನ ಯುಪಿಎ ಸರ್ಕಾರ‌ ಇದ್ದಾಗ ನೀಡಿತ್ತು. ಆದರೆ ಈ ಬಜೆಟ್​ನಲ್ಲಿ 7,559 ಕೋಟಿ ಅನುದಾನ ಕೊಟ್ಟಿದ್ದೇವೆ. 47,016 ಕೋಟಿ ಮೊತ್ತದ 31 ಯೋಜನೆಯ ರೈಲ್ವೆ ಕಾಮಗಾರಿ ನಡೆಯುತ್ತಿದೆ. 640 ರೈಲ್ವೇ ಸೇತುವೆ, ವಂದೇ ಭಾರತ್ ರೈಲು ಸೇರಿ ಹಲವು ರೈಲ್ವೆ ಯೋಜನೆ ಜಾರಿಯಲ್ಲಿವೆ. ಐಐಟಿ ಧಾರವಾಡ, ತುಮಕೂರಲ್ಲಿ ಮೊದಲ‌ ಕೈಗಾರಿಕಾ ಕಾರಿಡಾರ್ ಪಾರ್ಕ್, 7 ಸ್ಮಾರ್ಟ್ ಸಿಟಿ ನಿರ್ಮಾಣವಾಗುತ್ತಿವೆ ಎಂದು ಮಾಹಿತಿ ನೀಡಿದರು.

4600 ಕಿಮೀ ರಸ್ತೆ ಈಗಾಗಲೇ ನಿರ್ಮಾಣವಾಗಿದೆ. ಹೆದ್ದಾರಿ ರಸ್ತೆ ನಿರ್ಮಾಣಕ್ಕಾಗಿ ೧ ಲಕ್ಷಕ್ಕೂ ಹೆಚ್ಚು ಕೋಟಿಯ ರಸ್ತೆ ಆಗಿದೆ. ಬೆಂಗಳೂರು-ಚೆನ್ನೈ ರಸ್ತೆ ಸೇರಿ‌ ಮೂರು ಹೆದ್ದಾರಿ ಕಾಮಗಾರಿ ಆಗುತ್ತಿವೆ. ಆದರೆ ಇದರಲ್ಲಿ ರಾಜ್ಯದ ಪಾಲು ಎಷ್ಟು? ಎಂದು ಪ್ರಶ್ನಿಸಿದರು.

ಕರ್ನಾಟಕ ಸರ್ಕಾರ ಎಲ್ಲದರಲ್ಲೂ ತೆರಿಗೆ ಹೆಚ್ಚಿಸಿದೆ. ದರ ಕೂಡ ಹೆಚ್ಚಳ ಆಗುತ್ತಿದೆ. ಸಹಜವಾಗಿ ಹಣದುಬ್ಬರ ಎದ್ದು ಕಾಣುತ್ತಿದೆ. ಕಂಪನಿಗಳು ಹೊರ ರಾಜ್ಯಕ್ಕೆ ಹೋಗುತ್ತಿವೆ. ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ. ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬರುತ್ತಿಲ್ಲ. ಎಸ್​ಟಿ ಎಸ್​ಸಿ ಹಣ ಬೇರೆ ಯೋಜನೆಗೆ ಬಳಕೆಯಾಗಿದೆ. ವಾಲ್ಮೀಕಿ ಹಣ ಏನಾಗಿದೆ ಎಂಬುದು ನಿಮಗೆ ಗೊತ್ತು. ರಾಜ್ಯದಲ್ಲಿ ಈ ರೀತಿಯ ಆಡಳಿತ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಬೆಂಗಳೂರಿನ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ. ಇದರ ಹೊಣೆಗಾರಿಕೆಯನ್ನು ನಿರ್ಮಲಾ ಸೀತಾರಾಮನ್‌ ಹೊರಬೇಕೆಂಬ ಸಿದ್ದರಾಮಯ್ಯನವರ ಹೇಳಿಕೆಗೆ ಕೆಂಡ ಕಾರಿದ ನಿರ್ಮಲಾ ಅವರು, ಅವರೊಬ್ಬರೇ ಚಾಣಾಕ್ಷ ಎಂದುಕೊಂಡಿದ್ದರೆ ಸಂತೋಷ ಎಂದು ವ್ಯಂಗ್ಯವಾಡಿದರು.

ನಾನು ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳುವುದಾದರೆ ಸಿದ್ದರಾಮಯ್ಯನವರು ಹಾಗೆಯೇ ಹೇಳಿಕೊಳ್ಳಲಿ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ, ಅವರೊಬ್ಬರೇ ಚಾಣಾಕ್ಷ ಎಂದುಕೊಂಡಿದ್ದರೆ ನನಗೂ ಅದರ ಹತ್ತು ಪಟ್ಟು ಚಾಣಾಕ್ಷತನ ತೋರಿಸಲು ಬರುತ್ತದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನಾನು ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹರ್ಷಿ ವಾಲೀಕಿ ನಿಗಮದಲ್ಲಿ ಹಗರಣ ನಡೆದಿಲ್ಲ ಎಂದಿದ್ದರೆ ಅವರ ಸಂಪುಟದ ಸಚಿವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ? ಮತ್ತೊಬ್ಬ ಶಾಸಕರು ಇ.ಡಿ. ವಿಚಾರಣೆಯನ್ನು ಏಕೆ ಎದುರಿಸುತ್ತಿದ್ದಾರೆ? ಎಂಬ ಸತ್ಯ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

ನಿಗಮದಲ್ಲಿ ಅಕ್ರಮ ನಡೆದಿದ್ದರೂ ಸಿದ್ದರಾಮಯ್ಯ ಒಪ್ಪಿಕೊಳ್ಳದಿರುವುದು ನನಗೆ ಆಶ್ಚರ್ಯವೇನೂ ಉಂಟುಮಾಡಿಲ್ಲ. ಏಕೆಂದರೆ ಅದು ಎಸ್‌‍ಸಿ/ಎಸ್‌‍ಟಿ ಸಮುದಾಯಕ್ಕೆ ಸೇರಿದ ಹಣ ಎಂಬ ಧೋರಣೆಯಿಂದ ಇದನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಈ ವರ್ಗಗಳಿಗೆ ಅನ್ಯಾಯ ಆಗಿದೆ. ಹಣದ ದರೋಡೆಗೆ ಹೊಣೆಯಾರು ಎಂದು ಪ್ರಶ್ನಿಸಿದರು.

ಒಂದು ವೇಳೆ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧ ಖಂಡಿತವಾಗಿ ಕಾನೂನಿನ ಪ್ರಕಾರವೇ ಕ್ರಮ ಆಗುತ್ತದೆ. ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ನೆಲದ ಕಾನೂನಿಗಿಂತ ಯಾರೊಬ್ಬರೂ ದೊಡ್ಡವರಲ್ಲ ಎಂದು ಹೇಳಿದರು.

ಎಸ್‌‍ಸಿ/ಎಸ್‌‍ಟಿ ಸಮುದಾಯಕ್ಕೆ ಸೇರಿದ ಹಣವನ್ನು ದರೋಡೆ ಮಾಡಿದವರು ಯಾರು? ಇದಕ್ಕೆ ಹೊಣೆಗಾರರು ಯಾರು? ಎಂಬುದು ಗೊತ್ತಾಗಬೇಕು. ಹಗರಣ ನಡೆದು ತಿಂಗಳಾಗಿದ್ದರೂ ಸಂಬಂಧಪಟ್ಟ ಸಚಿವರಿಂದ ರಾಜೀನಾಮೆ ನೀಡಲು ವಿಳಂಬ ಮಾಡಿದಿರಿ. ಅಧಿಕಾರಿಗಳ ತಲೆಗೆ ಕಟ್ಟಿ ಈ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿತ್ತು ಎಂದು ಆರೋಪಿಸಿದರು.

ಹಣ ದೋಚಿದ್ದು ನಿಮ ಇಲಾಖೆ. ಈ ಹಣವು ಎಸ್‌‍ಸಿ/ಎಸ್‌‍ಟಿ ವರ್ಗಗಳಿಗೆ ಸೇರಿದ್ದು ಎಂಬುದನ್ನು ಮೊದಲು ಸಿದ್ದರಾಮಯ್ಯನವರು ಅರಿತುಕೊಂಡು ಮಾತನಾಡಲಿ. ಇದರಲ್ಲಿ ರಾಜಕಾರಣವನ್ನು ವಿಲೀನ ಮಾಡುವುದಾದರೆ ನಮಗೂ ಮಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು.

ಎಸ್‌‍ಸಿ/ಎಸ್‌‍ಟಿ ವರ್ಗಗಳಿಗೆ ಸೇರಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದೀರಿ. ನಿಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುವ ಸೌಜನ್ಯ ಇಲ್ಲವೇ ಎಂದು ಕೆಂಡ ಕಾರಿದರು.

ಶನಿವಾರ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಬೇಕಿತ್ತು. ರಾಜ್ಯದ ಸಮಸ್ಯೆಗಳ ಬಗ್ಗೆ ಅಲ್ಲಿ ಬೆಳಕು ಚೆಲ್ಲಿದ್ದರೆ ಕರ್ನಾಟಕಕ್ಕೆ ಅನುಕೂಲವಾಗುತ್ತಿತ್ತು. ಅವರು ನೀತಿ ಆಯೋಗವನ್ನು ವೇದಿಕೆಯಾಗಿ ಬಳಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡರು ಎಂದು ಅಸಮಾಧಾನ ಹೊರಹಾಕಿದರು.

ನೀತಿ ಆಯೋಗದ ಸಭೆಗೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೈಕ್‌ ಆಫ್‌ ಮಾಡಲಾಗಿತ್ತು ಎಂಬುದು ಶುದ್ಧ ಸುಳ್ಳು. ನಾವೇಕೆ ಅವರ ಮೈಕ್‌ ಆಫ್‌ ಮಾಡಬೇಕು. ಅವರು ಸಭೆಗೆ ಬಂದಿದ್ದೇ ವಿವಾದ ಸೃಷ್ಟಿಸಲು. ಒಳಗೆ ಏನು ಹೇಳಬೇಕೆಂಬ ಅರಿವಿಲ್ಲದೆ ಹೊರಗೆ ಬಂದು ಏನೇನೋ ಸುಳ್ಳು ಆರೋಪಗಳನ್ನು ಮಾಡಿದರು. ಅವರ ಹೇಳಿಕೆಗೂ, ಮಾಡಿರುವ ಆರೋಪಕ್ಕೂ ಒಂದಕ್ಕೊಂದು ಸಂಬಂಧವಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT