ನವದೆಹಲಿ: ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಪ್ರೀತಂಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಸಭೆ ಕರೆಯುತ್ತೀರಾ? ಪೆನ್ ಡ್ರೈವ್ ಹಂಚಿದೋರು ಯಾರು ಅಂಥ ಗೊತ್ತಿಲ್ವಾ? ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದು ಹೇಳುವ ಮೂಲಕ ಬಿಜೆಪಿ ಪಾದಯಾತ್ರೆಗೆ ಎಚ್‌ಡಿಕೆ ಗರಂ ಆಗಿದ್ದಾರೆ.
ಪಾದಯಾತ್ರೆ ಸಂಬಂಧ ದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ಜೆ.ಟಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಜೆಪಿ ನಿಲುವಿನಲ್ಲಿ ತಿರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಸೂಕ್ತವಾದ ಸಂದರ್ಭವಲ್ಲ ಅನ್ನೋ ಕಾರಣಕ್ಕೆ ನಾವು ಹಿಂದೆ ಸರಿದಿದ್ದೇವೆ.
ಜನರಿಂದ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಪಾದಯಾತ್ರೆಯಿಂದ ಆಗುವ ಲಾಭ ಏನು ? ಕಾನೂನು ಹೋರಾಟವು ಮುಖ್ಯ. ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ. ನಾವು ನೈತಿಕ ಬೆಂಬಲವೂ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು. ಬೆಂಗಳೂರಿನಿಂದ ಮೈಸೂರುವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸಿದಿದ್ದರೆ ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನನ್ನ ಮನಸ್ಸಿಗೆ ನೋವಾಗಿದೆ. ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು? ಪ್ರೀತಂಗೌಡ ಯಾರು? ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಅನ್ನೋದು ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಆತ. ಅಂತವರ ಜೊತೆಗೆ ವೇದಿಕೆ ಮೇಲೆ ಕೂರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ನಮ್ಮ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ವಿರುದ್ಧ ತೀರ್ಮಾನವಾಗಿದೆ. ಕೇರಳದಲ್ಲಿ ಜೀವ ಹಾನಿಯಾಗಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ರೆಡ್ ಅರ್ಲಟ್ ಘೋಷಿಸಲಾಗಿದೆ. ಕೊಡಗು ಕೂಡ ಜಲಾವೃತವಾಗಿದೆ. ಮಂಡ್ಯ ಭಾಗದಲ್ಲಿ ನದಿ ನೀರು ಬಿಟ್ಟಿದ್ದಾರೆ. ರೈತರು ಕೃಷಿ ಕೆಲಸ ಶುರು ಮಾಡಲಿದ್ದಾರೆ. ಬಿಜೆಪಿ ನಾಯಕರು ಸಭೆಯಲ್ಲಿ ಪೂರ್ವ ಸಿದ್ದತೆ ಮಾಡಿಕೊಂಡಿದ್ದರು. ನಮ್ಮ ಮಾಹಿತಿಗೆ ಇರಲಿ ಎಂದು ತಿಳಿಸಿದ್ದಾರಷ್ಟೇ. ಇದು ಸೂಕ್ತ ಸಂದರ್ಭ ಅಲ್ಲ ಹಾಗಾಗಿ ಹಿಂದೇ ಸರಿದ್ದೇವೆ. ಜನಸಮಾನ್ಯರ ಭಾವನೆ ಮುಖ್ಯ. ನಮ್ಮ ನೈತಿಕ ಬೆಂಬಲವೂ ಇಲ್ಲ. ಬಿಜೆಪಿ ಪಾದಯಾತ್ರೆ ತೀರ್ಮಾನ ನನ್ನ ಮನಸ್ಸಿಗೆ ನೋವು ತಂದಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.