ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ 
ರಾಜಕೀಯ

ಪ್ರಭಾವಿ ನಾಯಕರ ಕ್ಷೇತ್ರದಲ್ಲೇ ಹಿನ್ನಡೆ, ಭ್ರಷ್ಟಾಚಾರ ಆರೋಪ: ಸಚಿವರ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ!

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಡಿಮೆ ಸ್ಥಾನ, ವಾಲ್ಮೀಕಿ ನಿಗಮದಲ್ಲಿ ಹಗರಣ ಆರೋಪ ಹಿನ್ನೆಲೆ ಸಚಿವರ ಜತೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಿ, ತರಾಟೆಗೆ ತೆಗೆದುಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಡಿಮೆ ಸ್ಥಾನ, ವಾಲ್ಮೀಕಿ ನಿಗಮದಲ್ಲಿ ಹಗರಣ ಆರೋಪ ಹಿನ್ನೆಲೆ ಸಚಿವರ ಜತೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಿ, ತರಾಟೆಗೆ ತೆಗೆದುಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳ ಉಸ್ತುವಾರಿ ಹೊತ್ತ ಸಚಿವರು ಕ್ಷೇತ್ರದಲ್ಲಿ ಕಡಿಮೆ ಮತಗಳಿಸಿ, ಸೋತಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್‌, ನೀವು ಹೇಳಿದವರಿಗೆ ಟಿಕೆಟ್ ಕೊಟ್ಟಿದ್ದೇವೆ. ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲಿತ್ತು. ಗೆಲ್ಲಿಸುವಲ್ಲಿ ವಿಫಲರಾಗಿದ್ದೀರಿ. ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು. ಮುಂದಿನ ದಿನದಲ್ಲಿ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಸಚಿವರು ರಾಜ್ಯ ಸರ್ಕಾರದ ವರ್ಚಸ್ಸಿಗೆ ದಕ್ಕೆ ಬರದ ಹಾಗೆ ನೋಡಿಕೊಳ್ಳಬೇಕು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ವಿರೋಧ ಪಕ್ಷಗಳ ವಾಗ್ದಾಳಿಗೆ ಸಿಲುಕದಂತೆ ಕೆಲಸ ಮಾಡಲು ಎಲ್ಲ ಸಚಿವರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆಂದು ಎಂದು ತಿಳಿದು ಬಂದಿದೆ.

ಚಿತ್ರದುರ್ಗ, ಕೋಲಾರ, ತುಮಕೂರು ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಆಂತರಿಕ ಕಚ್ಚಾಟದಿಂದ ಪಕ್ಷದ ಸೋಲಿನ ವರದಿ ರಾಹುಲ್ ಬಳಿ ಇತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈಗಾಗಲೇ ಈ ಬಗ್ಗೆ ಕ್ರಮಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ

ಇದೀಗ ಸ್ವತಃ ರಾಹುಲ್ ಗಾಂಧಿಯವರೇ ಸಚಿವರೊಂದಿಗೆ ಸಭೆ ನಡೆಸಿದ್ದು, ಇದರ ಬೆನ್ನಲ್ಲೇ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸುವಲ್ಲಿ ವಿಫಲವಾಗಿರುವ ಸಚಿವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರಾಹುಲ್ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಎಲ್ಲ ಸಚಿವರೊಂದಿಗೆ ಚರ್ಚಿಸಿದ್ದು, ಚುನಾವಣಾ ಫಲಿತಾಂಶದ ಬಗ್ಗೆ ವರದಿ ಕೇಳಿದ್ದಾರೆ. ನಮ್ಮ ಎಲ್ಲ ನಾಯಕರ ಜತೆ ಚರ್ಚಿಸಿ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು ಎಂದು ಡಿಕೆ. ಶಿವಕುಮಾರ್ ಅವರು ಸುದ್ದಿಗಾರರಿಗೆ ಹೇಳಿದರು.

ರಾಜ್ಯದಿಂದ ಪಕ್ಷಕ್ಕೆ 5-6 ಸ್ಥಾನಗಳನ್ನು ರಾಹುಲ್ ಗಾಂಧಿ ಹೆಚ್ಚು ನಿರೀಕ್ಷಿಸಿದ್ದರು. ಶನಿವಾರ ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದ್ದು, ಸಭೆಯಲ್ಲಿ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಭಾಗವಹಿಸುತ್ತಿದ್ದೇವೆ. ವಾಪಸಾದ ನಂತರ ಪಕ್ಷದೊಳಗಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಪರಿಣಾಮ ಕುರಿತು ಚರ್ಚೆಗಳಾಗಿಲ್ಲ. ಲೋಕಸಭೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಕೇಂದ್ರದ "ಮಲತಾಯಿಯ" ಧೋರಣೆ ಕುರಿತು ಪ್ರಸ್ತಾಪಿಸುವಂತೆ ನೂತನ ಚುನಾಯಿತ ಸಂಸದರಿಗೆ ಸೂಚಿಸಿದರು. ಕಾಂಗ್ರೆಸ್ ಫಲಿತಾಂಶ ಸುಧಾರಿಸಿದೆ. ಪಕ್ಷದ ಸಂಸದರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆಂದು ಹೇಳಿದರು.

ಪಕ್ಷದ ಹಿರಿಯ ನಾಯಕರಾಗಿರುವ ಗೃಹ ಸಚಿವ ಡಾ.ಪರಮೇಶ್ವರ್ ಹಾಗೂ ಇತರೆ ನಾಯಕರು ಬೆಂಗಳೂರಿನಲ್ಲಿಯೇ ಇದ್ದರೂ ಸಭೆಗೆ ಹಾಜರಾಗಿರಲಿಲ್ಲ. ತುಮಕೂರಿನಲ್ಲಿ ಪಕ್ಷದ ಸೋಲು ಅಸಮಾಧಾನ ತಂದಿರಬಹುದು ಎಂದು ಹೇಳಲಾಗುತ್ತಿದೆ.

ಸಚಿವರಿಗೆ ಯಾವುದೇ ಔಪಚಾರಿಕ ಆಹ್ವಾನ ಇರಲಿಲ್ಲ. ಹೀಗಾಗಿಯೇ ಹಲವು ನಾಯಕರು ಸಭೆಗೆ ಹಾಜರಾಗಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ

SCROLL FOR NEXT