ಬೆಂಗಳೂರು: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಕಡತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹಿ ಹಾಕಿದ್ದು, ಜೈ ಜವಾನ್ ಜೈ ಕಿಸಾನ್ ಮೋದಿಯವರಿಗೆ ಕೇವಲ ಘೋಷಣೆಯಲ್ಲ, ಅದು ಬದ್ಧತೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಸೋಮವಾರ ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಅವರು, ದೇಶದ 9.3 ಕೋಟಿ ಕೃಷಿಕ ಬಂಧುಗಳ ಬ್ಯಾಂಕ್ ಖಾತೆಗಳಿಗೆ 20,000 ಕೋಟಿ ರೂಗಳನ್ನು ಬಿಡುಗಡೆಗೊಳಿಸಲು ಪಿಎಂ ಕಿಸಾನ್ ನಿಧಿಯ 17ನೇ ಕಂತಿನ ಕಡತಗಳಿಗೆ ಪ್ರಧಾನಿ ಮೋದಿಯವರು ತಮ್ಮ ಮೂರನೇ ಅವಧಿಯ ಮೊದಲ ದಿನವೇ ಪ್ರಥಮ ಆದ್ಯತೆಯಾಗಿ ಸಹಿ ಹಾಕಿದ್ದಾರೆ. ಜೈ ಜವಾನ್ ಜೈ ಕಿಸಾನ್ ಮೋದಿಜಿಯವರಿಗೆ ಘೋಷಣೆಯಲ್ಲ, ಅದು ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಸಿರುವ ಹಲ್ಲೆ ಘಟನೆಯನ್ನು ಖಂಡಿಸಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರಿನಲ್ಲಿ ವಿಜಯೋತ್ಸವದ ರ್ಯಾಲಿಯ ಸಂದರ್ಭದಲ್ಲಿ ನಮ್ಮ ಪಕ್ಷದ ಇಬ್ಬರು ಕಾರ್ಯಕರ್ತರಾದ ಹರೀಶ್ ಹಾಗೂ ವಿನೋದ್ ಅವರ ಮೇಲೆ ಕಾಂಗ್ರೆಸಿನ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದು, ಈಗ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ನಮ್ಮ ರಾಜ್ಯ ಸರ್ಕಾರದ ಕಣ್ಣಿಗೆ ಬೀಳಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಬಿಜೆಪಿ ಕೂಡ ಪೋಸ್ಟ್ ಮಾಡಿದ್ದು, ಘಟನೆಗೆ ಖಂಡನೆ ವ್ಯಕ್ತಪಡಿಸಿದೆ. ಶಾಂತಿ-ನೆಮ್ಮದಿ-ಸಮೃದ್ಧಿಗೆ ಸುದ್ದಿಯಾಗುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಅರಾಜಕತೆ-ಅತ್ಯಾಚಾರ-ಕೊಲೆ-ಸುಲಿಗೆಗಳಿಗೆ ಸುದ್ದಿಯಾಗುತ್ತಿರುವುದು ದುರಂತ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಸಂಭ್ರಮಿಸಿದರೆ, ಅದನ್ನೂ ಸಹಿಸದ ದುಷ್ಕರ್ಮಿಗಳು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸ್ವಯಂಘೋಷಿತ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಹಿಂದೂಗಳಿಗೆ ಶಾಂತಿಗಿಂತ ಅಶಾಂತಿ ಒಲಿದಿದ್ದೇ ಹೆಚ್ಚು. ದ್ವೇಷವನ್ನೇ ಉಸಿರಾಗಿಸಿಕೊಂಡಿರುವ ನಿಮ್ಮ ಅಮಾಯಕ ಬ್ರದರ್ಸ್‌ಗಳ ವಿರುದ್ಧ ಕ್ರಮ ಯಾವಾಗ ಎಂಬುದನ್ನು ತಿಳಿಸಿ ಎಂದು ಆಗ್ರಹಿಸಿದೆ.