ರಾಮನಗರ: ನಾನು ಬಾಳಬೇಕು ಬದುಕಬೇಕು, ನನ್ನ ಕೆಲಸವನ್ನೆಲ್ಲಾ ಮಾಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸವನ್ನೂ ಮಾಡಬೇಕು. ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೇದರಿಕೊಳ್ಳಬೇಡಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಗದ್ಗದಿತರಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಡಿಕೆ ಸುರೇಶ್ ಅವರಿಗೆ ಸೋಲಾಗಿದ್ದು, ಈ ಹಿನ್ನೆಲೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ಚುನಾವಣೆಯಲ್ಲಿ ಅನುಭವಿಸಿದ ಸೋಲು ಆಕಸ್ಮಿಕ, ಇದು ಶಾಶ್ವತವಲ್ಲ. ಸೋತಿರುವ ಕಾರಣಕ್ಕೆ ಕ್ಷೇತ್ರದಿಂದ ದೂರವುಳಿಯಲ್ಲ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸೇರಿ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲು ಕಂಕಣಬದ್ಧನಾಗಿದ್ದೇನೆ ಎಂದು ಹೇಳಿದರು.
ರಾಜಕಾರಣವೆಂದರೆ ಅಧಿಕಾರವಲ್ಲ, ಅಧಿಕಾರಕ್ಕಾಗಿ ತಾನು ಯಾವತ್ತೂ ಹಾತೊರೆದವನಲ್ಲ, ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡುತ್ತೇನೆ ಎಂದು ಹೇಳುವಾಗ ಸುರೇಶ್ ಭಾವುಕರಾದರು. ನಿಮ್ಮೆಲ್ಲರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಅವರೊಂದಿಗೆ ಕೈ ಜೋಡಿಸಿ ತಾನು ಕೆಲಸ ಮಾಡುವುದಾಗಿ ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿಲ್ಲ, ಬಿಜೆಪಿಯೂ ಗೆದ್ದಿಲ್ಲ, ನನ್ನ ಮೇಲಿನ ಆಕ್ರೋಶ ಗೆಲುವು ಸಾಧಿಸಿದೆ ಎಂದು ಅವರು ಹೇಳಿದರು.