ನವದೆಹಲಿ: ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ವಿಶಾಖಪಟ್ಟಣಂ ಮತ್ತು ಸೇಲಂ ಸೇರಿದಂತೆ ಎಲ್ಲಾ ಉಕ್ಕಿನ ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
"ತುಕ್ಕು ಹಿಡಿದ" ಸರ್ಕಾರದಲ್ಲಿ ಕುಮಾರಸ್ವಾಮಿ ಹೊಸ ಉಕ್ಕಿನ ಸಚಿವರಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ ಮತ್ತು ವಿಶಾಖಪಟ್ಟಣಂ, ಸೇಲಂ, ನಗರನಾರ್, ಭದ್ರಾವತಿ ಹಾಗೂ ದುರ್ಗಾಪುರದ ಉಕ್ಕಿನ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, ಹಿಂದಿನ ಸರ್ಕಾರ ಸಾಮಾನ್ಯವಾಗಿ ವೈಜಾಗ್ ಸ್ಟೀಲ್ ಪ್ಲಾಂಟ್ ಎಂದು ಕರೆಯಲ್ಪಡುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್(ಆರ್‌ಐಎನ್‌ಎಲ್) ಅನ್ನು ಪ್ರಧಾನಿ ತಮ್ಮ ಸ್ನೇಹಿತರಿಗೆ ಮಾರಾಟ ಮಾಡುವ ಪ್ರಸ್ತಾಪ ಮಾಡಿದ್ದರು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕಾಗಿ ವೈಜಾಗ್ ಸ್ಟೀಲ್ ಪ್ಲಾಂಟ್ ಅವಲಂಬಿಸಿದ್ದಾರೆ. ಆರ್‌ಐಎನ್‌ಎಲ್ ಅದರ ಜಂಟಿ ಉದ್ಯಮಗಳು ಮತ್ತು ಅಂಗಸಂಸ್ಥೆಗಳನ್ನು ಶೇ. 100 ರಷ್ಟು ಖಾಸಗೀಕರಣಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಜನವರಿ 2021 ರಂದು ಅನುಮೋದನೆ ನೀಡಿತ್ತು. ಇದನ್ನು ಆರ್‌ಐಎನ್‌ಎಲ್ ಒಕ್ಕೂಟಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಉದ್ದೇಶಪೂರ್ವಕ ಸರ್ಕಾರದ ನಿರ್ಲಕ್ಷ್ಯವು ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಉಕ್ಕಿನ ಕಾರ್ಖಾನೆಯನ್ನು ಮತ್ತಷ್ಟು ನಷ್ಟಕ್ಕೆ ತಳ್ಳುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.
''ವೈಜಾಗ್ ಸ್ಟೀಲ್ ಪ್ಲಾಂಟ್ ಅನ್ನು '' ಪ್ರಧಾನ ಮಂತ್ರಿಯ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಮಾರಾಟ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಲಿಖಿತ ಭರವಸೆ ನೀಡುತ್ತಾರೆಯೇ?'' ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.