ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದ್ದು, ಐದು ವರ್ಷ ಶತಾಯಗತಾಯ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಸಂಕಲ್ಪ ತೊಟ್ಟಿದೆ. ಇದಕ್ಕಾಗಿ ಹಣ ಹೊಂದಿಸಲು ಸಕಲ ದಾರಿಗಳನ್ನೂ ಅವಲೋಕಿಸುತ್ತಿದ್ದು, ಈ ನಿಟ್ಟಿನಲ್ಲಿ ಆದಾಯ ಹೆಚ್ಚಿಸಲು ಖಾಸಗಿ ಕನ್ಸಲ್ಟಿಂಗ್ ಸಂಸ್ಥೆಯಾದ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ನ್ನು ಆರು ತಿಂಗಳ ಕಾಲ 9.5 ಕೋಟಿ ರೂ.ಗೆ ನೇಮಿಸಿಕೊಂಡಿದೆ. ಆದರೆ, ಸರ್ಕಾರ ಈ ನಡೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದ ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಿ ಹೆಚ್ಚುವರಿ ಆದಾಯ ತರುವ ಸಲುವಾಗಿ ಸಲಹೆ ನೀಡಲು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಎಂಬ ವಿದೇಶಿ ಸಂಸ್ಥೆಯನ್ನು ಸರ್ಕಾರ ನೇಮಿಸಿದೆ. ಈ ಸಂಸ್ಥೆಗೆ ಆರು ತಿಂಗಳಿಗೆ 9.5 ಕೋಟಿ ರೂ. ಸಂಭಾವನೆಯನ್ನು ನಿಗದಿಪಡಿಸಿದೆ.
ಆದರೆ, ರಾಜ್ಯದ ಆರ್ಥಿಕ ವ್ಯವಹಾರಗಳ ನಿರ್ವಹಣೆಗೆ ವಿದೇಶಿ ಕಂಪನಿಯನ್ನು ನೇಮಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿವೈ ವಿಜಯೇಂದ್ರ ಅವರು ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ನಮ್ಮ ರಾಜ್ಯ ಸರ್ಕಾರ ಹಣಕಾಸು ವ್ಯವಹಾರಗಳ ಮೇಲ್ವಿಚಾರಣೆ ಮಾಡಲು ವಿದೇಶಿ ಸಲಹೆಗಾರರನ್ನು ನೇಮಿಸಿಕೊಂಡಿರುವುದು ಈಸ್ಟ್ ಇಂಡಿಯಾ ಕಂಪನಿಗೆ ಹಿಡಿತವನ್ನು ಹಸ್ತಾಂತರಿಸುವಂತಿದೆ.
ಸಿದ್ದರಾಮಯ್ಯನವರು ವಿದೇಶಿ ಕಂಪನಿಗಳ ನೆರವಿಗೆ ಅಂಗಲಾಚಿದ್ದೇಕೆ? ಇದು ಭಾರತೀಯರ ತೆರಿಗೆ ಹಣ ಎಂದು ಬೊಬ್ಬೆ ಹೊಡೆಯಲಿಲ್ಲವೇಕೆ ತಾವು? ಭಾರತೀಯರಿಗೆ ಅವಮಾನ ಎನ್ನಲಿಲ್ಲವೇಕೆ ತಾವು ಎಂದು ಪ್ರಶ್ನಿಸಿದ್ದಾರೆ.
ಈ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕಾಗಿ ಸಿದ್ದರಾಮಯ್ಯ ರಾಜ್ಯದ ಮತದಾರರಿಗೆ ಅಗೌರವ ತೋರುತ್ತಿದೆ ಮತ್ತು ಅವಮಾನಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರವು ತನ್ನನ್ನು ತಾನು ಅನರ್ಹ ಮತ್ತು ಅಸಮರ್ಥ ಎಂಬುದನ್ನು ಸಾಬೀತುಪಡಿಸಿದ ಹಾಗಾಗಿದೆ. ರಾಜ್ಯ ಸರ್ಕಾರವು ಬಾಹ್ಯ ಏಜೆನ್ಸಿಯ ನಿರ್ದೇಶನದಲ್ಲಿ ಕಾರ್ಯನಿರ್ವಹಿಸಿದಾಗ, ಜನರ ಅಭ್ಯುದಯಕ್ಕೆ ಹಿನ್ನಡೆಯಾಗುತ್ತದೆ ಮತ್ತು ಅಮಾಯಕ ನಾಗರಿಕರು ತೊಂದರೆ ಅನುಭವಿಸುತ್ತಾರೆ. ಇತ್ತೀಚೆಗಿನ ಇಂಧನ ಬೆಲೆ ಏರಿಕೆ ಇದರ ಆರಂಭವಷ್ಟೇ ಎಂದು ಆರೋಪಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪೋಸ್ಟ್ ಮಾಡಿ, ಅತಿ ಹೆಚ್ಚು ಬಜೆಟ್ ಮಂಡಿಸಿದ ಸಿಎಂ, ಆರ್ಥಿಕ ಸುಧಾರಣೆಗಳ ಹರಿಕಾರರಾದ ಆರ್ಥಿಕ ತಜ್ಞ ಸಿದ್ದರಾಮಯ್ಯನವರು ಇಂತಹ ಸಂಸ್ಥೆಗಳನ್ನು ನೇಮಕ ಮಾಡುವ ಅವಶ್ಯಕತೆ ಏನಿತ್ತು.? ನಮ್ಮ ವಿತ್ತ ಇಲಾಖೆಯಲ್ಲಿ ಅಧಿಕಾರಿಗಳು, ನುರಿತ ಸಿಬ್ಬಂದಿ ಇರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಗತ್ಯ ಇರುವ ಯೋಜನೆಗಳಿಗೆ ಹಣ ಬಳಸುವುದನ್ನು ಬಿಟ್ಟು ತನ್ನ ವೋಟ್ ಬ್ಯಾಂಕ್ ಸಧೃಡವಾಗಿರಲು ಈ ರೀತಿ ಸಂಸ್ಥೆಗಳನ್ನು ಯೋಜಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕ ಅಶೋಕ್ ಅವರು ಪೋಸ್ಟ್ ಮಾಡಿ, ಸಿದ್ದರಾಮಯ್ಯ ಅವರಂತಹ ಸ್ವಯಂಘೋಷಿತ ಅರ್ಥಶಾಸ್ತ್ರಜ್ಞರು ರಾಜ್ಯದ ಮುಖ್ಯಮಂತ್ರಿಯಾಗಿರುವಾಗ ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ಅಗತ್ಯವೇನಿದೆ? ಈ ಸಂಸ್ಥೆ ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚಿಸುತ್ತದೆಯೇ ಎಂಬುದು ಖಚಿತವಿಲ್ಲ, ಆದರೆ, ರಾಜ್ಯದ ತೆರಿಗೆ ಪಾವತಿದಾರರ ವೆಚ್ಚದಲ್ಲಿ ಖಾಸಗಿ ಸಲಹಾ ಸಂಸ್ಥೆಯ ಆದಾಯವನ್ನು ಖಂಡಿತವಾಗಿಯೂ ಹೆಚ್ಚಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ನಡುವೆ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂಬ ಬಸವಣ್ಣನವರ ವಚನ ತಮಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದೆ.
ನಿಮ್ಮ ಮೋದಿ ಸರ್ಕಾರದಲ್ಲೇ ಡೊಂಕು ಇಟ್ಟುಕೊಂಡು ಇತರರೆಡೆ ಕೈ ತೋರಿಸುವುದೇಕೆ ಸ್ವಾಮಿ? ಕೇಂದ್ರದ 16 ಇಲಾಖೆಗಳ ಪ್ರಾಜೆಕ್ಟ್ ಗಳನ್ನು ವಿದೇಶಿ ಕಂಪನಿಗಳಿಗೆ ಕೊಟ್ಟಿದ್ದು ನಿಮಗೆ ತಿಳಿದಿಲ್ಲವೇ? ವಿದೇಶಿ ಕಂಪನಿಗಳಿಗೆ ರೂ.500 ಕೋಟಿ ನೀಡಿದ್ದರ ಬಗ್ಗೆ ನಿಮಗೆ ಅರಿವಿಲ್ಲವೇ ಎಂದು ಖಾರವಾಗಿ ಪ್ರಶ್ವಿಸಿದೆ.
ಸ್ಟ್ಯಾಂಡ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮನಿರ್ಭರ್ ಎನ್ನುವ ನಿಮ್ಮ ಮೋದಿ ಆಡಳಿತಾವಧಿಯಲ್ಲೇ ಕೇಂದ್ರ ಸರ್ಕಾರದಗಳ 16 ಇಲಾಖೆಗಳ ಪ್ರಾಜೆಕ್ಟ್ ಗಳನ್ನು ವಿದೇಶಿ ಕಂಪನಿಗೆ ಕೊಟ್ಟಿದ್ದಾರೆ ಎಂದು ಕುಟುಕಿದೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮಾತನಾಡಿ, ಬಿಸಿಜಿ ಜಾಗತಿಕ ಮಟ್ಟದಲ್ಲಿ ಇರುವ ಪ್ರತಿಷ್ಠಿತ ಸಂಸ್ಥೆಯಾಗಿದೆ. ರಾಜ್ಯ ಸರ್ಕಾರವು ಹಲವು ವರ್ಷಗಳಿಂದ ಇದರ ಸೇವೆಗಳನ್ನು ಪಡೆದುಕೊಂಡಿದೆ. ವಿಷನ್ ಡಾಕ್ಯುಮೆಂಟ್ 2047 ತಯಾರಿಸಲು ಬಿಸಿಜಿಯನ್ನೇಕೆ ನೇಮಿಸಿದರು ಎಂಬುದನ್ನು ಬಿಜೆಪಿ ಮೊದಲು ಮೋದಿಯವರನ್ನು ಕೇಳಬೇಕು. ಈ ರೀತಿಯ ಆಧಾರರಹಿತ ಆರೋಪಗಳು ಸರಿಯಲ್ಲ ಎಂದು ಹೇಳಿದ್ದಾರೆ.
ಟೆಂಡರ್ ಕರೆದು ಪಾರದರ್ಶಕವಾಗಿ ಬಿಸಿಜಿ ನೇಮಕ ಮಾಡಲಾಗಿದೆ. ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಸಂಸ್ಥೆಯನ್ನು ನೇಮಿಸಿದ್ದರು. ಹಣಕಾಸಿನ ವಿಷಯಗಳ ಬಗ್ಗೆ ಮಾರ್ಗದರ್ಶನಕ್ಕಾಗಿ ನಾವು ಕೂಡ ಸಂಸ್ಥೆಯನ್ನು ನೇಮಿಸಿಕೊಂಡಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸಿದ್ದರಾಮಯ್ಯ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಆದಾಯವನ್ನು ಹೆಚ್ಚಿಸಲು ಬಿಸಿಜಿಯನ್ನು ನೇಮಿಸಿಕೊಳ್ಳಲು ಇದೇ ಕಾರಣ ಎಂಬ ಆರೋಪಕ್ಕೆ ಉತ್ತರಿಸಿ, ಮೋದಿ ಸರ್ಕಾರವೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದೆಯೇ ಎಂದು ಮರು ಪ್ರಶ್ನಿಸಿದರು. ಅಲ್ಲದೆ, ವಿಜಯೇಂದ್ರ ಅವರು ಇಂತಹ ಹೇಳಿಕೆಗಳನ್ನು ನೀಡುವ ಮೊದಲು ತಮ್ಮ ಮನೆಕೆಲಸವನ್ನು ಸರಿಯಾಗಿ ಮಾಡಬೇಕು ಎಂದು ತಿರುಗೇಟು ನೀಡಿದರು.
ಸರ್ಕಾರದ ನಡೆಗೆ ಪ್ರವೀಣ್ ಚಕ್ರವರ್ತಿ ಟೀಕೆ, ಕ್ಷಮೆಯಾಚನೆ
ಈ ನಡುವೆ ಸರ್ಕಾರದ ಈ ನಡೆಯನ್ನು ರಾಹುಲ್ ಗಾಂಧಿ ಆಪ್ತ ಸಲಹೆಗಾರರಿಗಾರುವ ಪ್ರವೀಣ್ ಚಕ್ರವರ್ತಿ ಟೀಕಿಸಿದ್ದು, ಒಂದು ರಾಜ್ಯ ಸರಿಯಾದ ಮಾರ್ಗದಲಿಲ್ಲ ಅನ್ನೋದನ್ನು ಒತ್ತಿ ಹೇಳಿದ್ದಾರೆ.
ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ ಕಂಪನಿ ಸಿದ್ದರಾಮಯ್ಯ ಸರ್ಕಾರ ಆದಾಯ ಕ್ರೋಢಿಕರಣಕ್ಕೆ ಮಾರ್ಗಗಳನ್ನು ಹುಡಿಕೊಡಲಿದೆ. ಇದೇ ವೇಳೆ ರಾಜ್ಯದ ಖರ್ಚು ವೆಚ್ಚ ಕಡಿಮೆ ಮಾಡಿ, ಆದಾಯ ಹೆಚ್ಚಿಸಲು ಮೂಲಗಳನ್ನು ಹುಡುಕಿಕೊಡಲಿದೆ. ಪಬ್ಲಿಕ್-ಪ್ರವೈಟ್ ಪಾರ್ಟ್ನರ್‌ಶಿಪಿ(ಪಿಪಿಪಿ ಮಾಡೆಲ್), ಸೋರಿಕೆ ತಡೆಗಟ್ಟುವಿಕೆ, ಆಸ್ತಿಗಳಿಂದ ಆದಾಯ ಕ್ರೋಢಿಕರಣ, ವಿವಿಧ ಇಲಾಖೆಗಳಲ್ಲಿ ಆದಾಯ ಹೆಚ್ಚಳಕ್ಕೆ ಮಾರ್ಗ, ಮೈನಿಂಗ್, ಅರಣ್ಯ ಸೇರಿದಂತೆ ಹಲವು ಮೂಲಗಳಿಂದ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಬಿಸಿಜಿ ಹೊತ್ತುಕೊಂಡಿದೆ. ಹಾಗಾಂತ ಈ ಕಂಪನಿ ಸುಮ್ಮನೆ ಈ ಹೊಣೆ ಹೊತ್ತುಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಕಳೆದ 6 ತಿಂಗಳಲ್ಲಿ ಬೋಸ್ಟನ್ ಗ್ರೂಪ್ ಕಂಪನಿಗೆ ಬರೋಬ್ಬರಿ 9.5 ಕೋಟಿ ರೂಪಾಯಿ ಪಾವತಿಸಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆ ಕೈಪಾಳಯದಲ್ಲಿ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಹೇಳಿಕೆಗೆ ಸ್ಪಷ್ಟನೆ ನೀಡಿ ಪ್ರವೀಣ್ ಅವರು ಕ್ಷಮೆಯಾಚಿಸಿದ್ದಾರೆ.
ರಾಜಕೀಯ ಮತ್ತು ನೀತಿ ಕಾರ್ಯಗಳನ್ನು ಹೊರಗುತ್ತಿಗೆ ನೀಡುವ ಸಂಸ್ಕೃತಿಯ ಕುರಿತು ನಾನು ನನ್ನ ಖಾಸಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಇದು ಸಂಶೋಧನಾ ವಲಯಗಳಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿರುವ ವಿಷಯವಾಗಿದ್ದು, ನನ್ನ ಹೇಳಿಕೆ ಸಂಪೂರ್ಣ ಶೈಕ್ಷಣಿಕವಾದದ್ದು. ನಾನು ಸಂದರ್ಭದ ಬಗ್ಗೆ ಹೆಚ್ಚು ಸಂವೇದನಾಶೀಲನಾಗಿರಬೇಕಿತ್ತು. ಯಾರನ್ನೂ ವೈಯಕ್ತಿಕ ಟೀಕೆ ಮಾಡುವ ಉದ್ದೇಶ ನನ್ನ ಹೇಳಿಕೆಯಲ್ಲಿರಲಿಲ್ಲ. ಪಕ್ಷವನ್ನು ಬಿಟ್ಟು ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಇದರಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ನೋವಾಗಿದ್ದು, ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ.