ಕೆ ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ 
ರಾಜಕೀಯ

ತಾಕತ್ತಿದ್ದರೆ ಜಾತಿ ಗಣತಿ ವರದಿ ಮಂಡಿಸಲಿ: ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲು

Manjula VN

ಮೈಸೂರು: ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ, ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಜಾತಿಗಣತಿ ವರದಿ ಮೂಲಕ ಜಾತಿ– ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ‌. ಹಿಂದುಳಿದ ವರ್ಗಗಳ ಚಾಂಪಿಯನ್ ಎನಿಸಿಕೊಳ್ಳಲು ಹಿಂದೂ ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯುತ್ತಿದ್ದಾರೆಂದು ಕಿಡಿಕಾರಿದರು.

ಜಾತಿ ಗಣತಿ ವರದಿ ಸ್ವೀಕಾರದ ಮೂಲಕ ಸಿದ್ದರಾಮಯ್ಯ ಕೆಟ್ಟ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ತಮಗೆ ಲಾಭ ಆಗಬಹುದು ಎಂಬ ಕಾರಣದಿಂದ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ ಜಾತ್ಯತೀತ ಪಕ್ಷ ಎಂದು ಹೇಳುವ ಕಾಂಗ್ರೆಸ್, ಈ ವರದಿ ಸ್ವೀಕಾರದ ವೇಳೆ ಕಾನೂನಾತ್ಮಕ‌ ಚಿಂತನೆ ನಡೆಸಬೇಕಿತ್ತು. ಇದು ಚರ್ಚೆಗೆ ಬಂದ್ರೆ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರೇ ಹೊಡೆದಾಡ್ತಾರೆ. ಸಮಾಜ ಛಿದ್ರ ಮಾಡಲು ಕಾಂಗ್ರೆಸ್ ‌ಪ್ರಯತ್ನ ಮಾಡಿದೆ. ಹಿಂದು ಸಮಾಜ ಒಗ್ಗಟ್ಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಹಿಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಜನಗಣತಿ ಮಾಡಬೇಕಾದವರು ಕೇಂದ್ರ ಸರ್ಕಾರದವರು. ಇದು ರಾಜ್ಯ ಸರ್ಕಾರದ ಕೆಲಸ ಅಲ್ಲ ಎಂದು ಹೇಳಿದರು.

ಇದೇ ವೇಳೆ ಸರ್ಕಾರ ಉರುಳಿಸಲು ಬಿಜೆಪಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ನೀಡುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪ ಕುರಿತು ಮಾತನಾಡಿ, ಆಮಿಷವೊಡ್ಡುತ್ತಿರುವವರ ಹೆಸರನ್ನು ಬಹಿರಂಗಪಡಿಸಿ, ಅವರನ್ನು ಜೈಲಿಗೆ ಹಾಕಬೇಕು. ಇಲ್ಲವೇ ಹೇಳಿಕೆ ಕುರಿತು ಕ್ಷಮೆಯಾಚಿಸಬೇಕು. ಗುಪ್ತಚರ ಇಲಾಖೆ ಮುಖ್ಯಮಂತ್ರಿಯವರ ಬಳಿ ಇರುವುದರಿಂದ ಅವರು ಸಾಕ್ಷ್ಯವನ್ನು ನೀಡಲೇಬೇಕು ಎಂದು ಹೇಳಿದರು.

ಅಲ್ಲದೆ, ಬಿಜೆಪಿ ಶಾಸಕರಾದ ಎಸ್‌ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರಿಗೆ ಅಡ್ಡ ಮತದಾನ ಹಾಗೂ ಮತದಾನದಿಂದಲೇ ದೂರ ಉಳಿಯವಂತೆ ಮಾಡಲು ಎಷ್ಟು ಹಣ ನೀಡಿದ್ದರು ಎಂಬುದನ್ನೂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆ ಚುನಾವಣೆ ಕುರಿತು ಮಾತನಾಡಿ, ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಅಭ್ಯರ್ಥಿಗಳ ಕುರಿತು ಹೈಕಮಾಂಡ್‌ಗೆ ವರದಿ ಸಲ್ಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಕುರಿತು ಮಾತನಾಡಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಯೋತ್ಪಾದಕರ ಪರವಾಗಿದ್ದಾರೆ. ಡಿಕೆಶಿಯವರು ಆತುರದ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಪ್ರಕರಣ ಕುರಿತು ಮಾತನಾಡಿ, ಎಫ್ಎಸ್ಎಲ್ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ತಡ ಮಾಡಿದಷ್ಟೂ ವರದಿ ತಿರುಚುತ್ತಿದ್ದಾರೆ ಎಂಬ ಅನುಮಾನ ಹೆಚ್ಚಾಗುತ್ತದೆ. ಅಂತಹ ಘಟನೆ ನಡೆದೇ ಇಲ್ಲ ಎಂದು ಕೆಲ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆ ವರದಿಗೇನು ಬೆಲೆ? ಎಂದು ಕೇಳಿದರು. ಜನರು ಆ ವರದಿ ಬಿಡುಗಡೆಗೆ ಕಾಯುತ್ತಿದ್ದಾರೆ. ನೀವು ಮುಸ್ಲಿಮರ ಪರವಾಗಿಯೇ ಇರಿ. ಆದರೆ, ಭಯೋತ್ಪಾದಕ ಚಟುವಟಿಕೆ ನಡೆಸುವವರು ಹಾಗೂ ದೇಶದ್ರೋಹಿಗಳನ್ನು ರಕ್ಷಿಸಬೇಡಿ’ ಎಂದು ಹೇಳಿದರು.

SCROLL FOR NEXT