ಯಡಿಯೂರಪ್ಪ
ಯಡಿಯೂರಪ್ಪ 
ರಾಜಕೀಯ

ಲೋಕಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಈ ವಾರ ಫೈನಲ್!

Shilpa D

ಶಿವಮೊಗ್ಗ: ಕರ್ನಾಟಕ ಸೇರಿದಂತೆ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಈ ವಾರ ಅಂತಿಮಗೊಳಿಸಲಾಗುವುದು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಮಾಡಿದ ಅವರು, ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ಬುಧವಾರ ಪಕ್ಷದ ಸಭೆ ಕರೆಯಲಾಗಿದ್ದು, ನಾನೂ ಭಾಗವಹಿಸುತ್ತಿದ್ದೇನೆ. ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದು ತಿಳಿಸಿದರು.

ದೆಹಲಿ ನಾಯಕರ ‌ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿ–ಜೆಡಿಎಸ್ ಹೊಂದಾಣಿಕೆ ನಿಶ್ಚಿತ. ಆದರೆ, ಸ್ಥಾನ ಹಂಚಿಕೆ ಅಂತಿಮವಾಗಿಲ್ಲ ಎಂದರು.

ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಆ ಬಗ್ಗೆ ಮಾಹಿತಿಯಿಲ್ಲ, ಸಭೆಯ ನಂತರ ತಿಳಿಸುವುದಾಗಿ ಹೇಳಿದರು. ಎಲ್ಲಾ 28 ಸ್ಥಾನಗಳು ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ನನಗೆ ವಿಶ್ವಾಸವಿದೆ. ಹೊಸ ಅಭ್ಯರ್ಥಿಗಳನ್ನು ಪಟ್ಟಿಯಲ್ಲಿ ಸೇರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ನಿರ್ಧಾರವನ್ನು ಬಹಿರಂಗಪಡಿಸಲಾಗುವುದು, ಜೆಡಿಎಸ್‌ಗೆ ಎಷ್ಟು ಸ್ಥಾನಗಳನ್ನು ನೀಡಲಾಗುವುದು ಎಂಬ ಬಗ್ಗೆಯೂ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ಮಂಡ್ಯ ಸಂಸದೆ ಸುಮಲತಾ ಅವರಿಗೆ ಪಕ್ಷದ ಟಿಕೆಟ್ ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೇಳಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಸಿದ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅಸೂಯೆಯಿಂದ ಮಾಡಲಾಗುತ್ತಿದೆ, ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನಕ್ಕೆ ಯಾವುದೇ ಅರ್ಥವಿಲ್ಲ.‌ ಅವರ ಒಳ್ಳೆಯ ಕೆಲಸಗಳನ್ನು ಸಹಿಸದೇ ಕೆಲವರು ಈ ರೀತಿ ಮಾಡಿದ್ದಾರೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಮಂಡ್ಯದಿಂದ ಸುಮಲತಾ ಸ್ಪರ್ಧೆ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ ಎಂದರು.

ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿದ ವರದಿ ಕೈಸೇರಿ ಮೂರು ನಾಲ್ಕು ದಿನ ಕಳೆದರೂ ಸರ್ಕಾರ ಅದನ್ನು ಬಿಡುಗಡೆ ಮಾಡಿಲ್ಲ. ಎಫ್‌ಎಸ್ಎ‌ಲ್‌ ವರದಿಯನ್ನು ಏಕೆ ಬಚ್ಚಿಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಆ ವರದಿಯಲ್ಲಿರುವ ಅಂಶಗಳನ್ನು ಬಹಿರಂಗಗೊಳಿಸಬೇಕು’ ಎಂದು ಒತ್ತಾಯಿಸಿದರು.

SCROLL FOR NEXT