ವಿ ಸೋಮಣ್ಣ
ವಿ ಸೋಮಣ್ಣ 
ರಾಜಕೀಯ

ತುಮಕೂರು ಲೋಕಸಭಾ ಕ್ಷೇತ್ರ; ಸೋಮಣ್ಣ ಸ್ಪರ್ಧೆಗೆ ಜೆಡಿಎಸ್ ನಾಯಕರ ಬೆಂಬಲ, ಸ್ವಪಕ್ಷಿಯರಿಂದಲೇ ವಿರೋಧ

Ramyashree GN

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಈಗಾಗಲೇ ಜೆಡಿಎಸ್‌ನ ಒಂದು ವರ್ಗದ ಮುಖಂಡರ ಬೆಂಬಲ ಸಿಗುತ್ತಿದೆ. ಆದರೆ, ಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿದೆ.

ಬಿಜೆಪಿ ಹೈಕಮಾಂಡ್ ಇನ್ನೂ ಟಿಕೆಟ್ ಘೋಷಣೆ ಮಾಡದಿದ್ದರೂ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೋಮಣ್ಣ ಅವರೇ ಎಂಬ ಊಹೆಯಲ್ಲಿ ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಸಭೆ ನಡೆಸಿದ್ದು, ಸೋಮಣ್ಣ ಅವರನ್ನು ಸನ್ಮಾನಿಸಲಾಗಿದೆ. ಸೋಮಣ್ಣ ಈ ಹಿಂದೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಭೇಟಿ ಮಾಡಿ, ಜೆಡಿಎಸ್ ಸ್ಥಳೀಯ ನಾಯಕರ ವಿಶ್ವಾಸ ಗಳಿಸಿದ್ದರು.

ಆದರೆ, ಸೋಮಣ್ಣ ಅವರು ತಮ್ಮದೇ ಪಕ್ಷದವರ ವಿರೋಧವನ್ನು ಎದುರಿಸುತ್ತಲೇ ಇದ್ದಾರೆ. ಸೋಮಣ್ಣ ಅವರಿಗೆ ಹಾಲಿ ಸಂಸದ ಜಿಎಸ್ ಬಸವರಾಜು ಈಗಾಗಲೇ ಬೆಂಬಲ ನೀಡಿದ್ದು, ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಗರು ಮಾಧುಸ್ವಾಮಿ ಅಥವಾ ಬಸವರಾಜು ಬೆಂಬಲಿಗರಾಗಿ ವಿಭಜನೆ ಹೊಂದುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಮಾಧುಸ್ವಾಮಿ ಕೂಡ ಈ ಬಾರಿ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಮಾಧುಸ್ವಾಮಿ ಅವರಲ್ಲದೆ, ಸಿದ್ದಗಂಗಾ ಮಠದ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮಿಗಳ ಸೋದರಸಂಬಂಧಿ ಡಾ. ಎಸ್ ಪರಮೇಶ್, ಯುವ ಮುಖಂಡರಾದ ವಿನಯ್ ಬಿದರೆ ಚಂದ್ರಶೇಖರ್, ಎಸ್ಪಿ ಚಿದಾನಂದ್ ಸೇರಿದಂತೆ ಇತರ ಟಿಕೆಟ್ ಆಕಾಂಕ್ಷಿಗಳು ಸೋಮಣ್ಣ ಅವರನ್ನು ಕಣಕ್ಕಿಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

SCROLL FOR NEXT