ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ 
ರಾಜಕೀಯ

ಶೋಭಾ ಕರೆದುಕೊಂಡು ಬಂದು ಸದಾನಂದ ಗೌಡಗೆ ಟಿಕೆಟ್ ತಪ್ಪಿಸಿದ್ದಾರೆ: ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಕಿಡಿ

Lingaraj Badiger

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬುಧವಾರ ಪ್ರಕಟವಾಗಿದ್ದು, ಪುತ್ರ ಕಾಂತೇಶ್​ಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ತೀವ್ರ ಆಕ್ರೋಶಗೊಂಡಿದ್ದು, ಗುರುವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಇಡೀ ರಾಜ್ಯದಲ್ಲಿ ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆದಷ್ಟು ಗೋ ಬ್ಯಾಕ್ ಬೇರೆ ಎಲ್ಲಿಯೂ ಆಗಿಲ್ಲ. ಅಂತಹ ಶೋಭಾಗೆ ಚಿಕ್ಕಮಗಳೂರಿನಿಂದ ಕರೆದುಕೊಂಡು ಬಂದು ಸದಾನಂದ ಗೌಡ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಶೋಭಾನ ಯಾಕೆ ಕರೆದುಕೊಂಡು ಬಂದು ಇಲ್ಲಿ ಹಾಕಿದ್ರು? ಎಂದು ಪ್ರಶ್ನಿಸಿದರು.

ನನ್ನ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಯಡಿಯೂರಪ್ಪ ನನಗೆ ಮೋಸ ಮಾಡಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.

ನಾನು 40 ವರ್ಷಗಳ ಕಾಲ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ಎಂದೆಂದಿಗೂ ಸಂಘಟನೆ ವಿರುದ್ಧ ಕೆಲಸ ಮಾಡಿಲ್ಲ. ರಾಯಣ್ಣ ಬ್ರಿಗೇಡ್ ಮಾಡಿ ಲಕ್ಷಾಂತರ ಜನರ ಸಂಘಟನೆ ಮಾಡುವ ಕೆಲಸ ಆಗಿತ್ತು. ಅದಕ್ಕೆ ಇವರಿಗೆ ಯಾಕೆ ಕಣ್ಣು ಉರಿ ಆಯ್ತೋ ಗೊತ್ತಿಲ್ಲ.ಯಡಿಯೂರಪ್ಪನವರು ಅಮಿತ್ ಶಾ ಬಳಿ ಹೋಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸೋಕೆ ಹೇಳಿ ಎಂದು ಒತ್ತಾಯ ಮಾಡಿದ್ದರು. ಆ ನಂತರ ನಾನು ದೊಡ್ಡವರ ಮಾತು ಕೇಳಿ ಸುಮ್ಮನೆ ಆದೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಅಂದಿದ್ದರು. ಅಲ್ಲದೆ ತಾವೇ ಹಾವೇರಿಯಲ್ಲಿ ಓಡಾಡಿ ಗೆಲ್ಲಿಸೋದಾಗಿ ಹೇಳಿದ್ದರು. ಈಗ ಯಡಿಯೂರಪ್ಪ ಮತ್ತು ಅವರ ಮಕ್ಕಳು ಅನ್ಯಾಯ ಮಾಡಿದ್ದಾರೆ. ಸಿ.ಟಿ.ರವಿ, ಕಟೀಲು, ಪ್ರತಾಪ್ ಸಿಂಹ, ಸದಾನಂದಗೌಡಗೆ ಅನ್ಯಾಯವಾಗಿದೆ. ಹೀಗಾಗಿ ನೊಂದ ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಎಲ್ಲರೂ ಒತ್ತಾಯಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಗೆ ಶಿವಮೊಗ್ಗದಲ್ಲಿ ಸಭೆ ನಡೆಸುತ್ತಿದ್ದೇವೆ. ಬಂಜಾರ ಭವನದಲ್ಲಿ ಎಲ್ಲಾ ಸಮುದಾಯದವರೂ ಸೇರುತ್ತಿದ್ದಾರೆ. ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

SCROLL FOR NEXT