ಕೆ ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ  
ರಾಜಕೀಯ

BSY ವಿರುದ್ಧ ಈಶ್ವರಪ್ಪ ಧಗಧಗ: ಶಿವಮೊಗ್ಗದಿಂದ ಕಾಂತೇಶ್ ಸ್ವತಂತ್ರವಾಗಿ ಸ್ಪರ್ಧೆ? ಡ್ಯಾಮೇಜ್ ಕಂಟ್ರೋಲ್ ಗೆ ಬಿಜೆಪಿ ಮುಂದು!

Shilpa D

ಬೆಂಗಳೂರು: ಬುಧವಾರ ಬಿಡುಗಡೆಯಾಗಿರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ನಾಯಕರ ಹೆಸರನ್ನು ಕೈಬಿಟ್ಟ ಕಾರಣ ಹೈಕಮಾಂಡ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಬಂಡಾಯ ಶಮನಗೊಳಿಸಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಘೋಷಣೆಯಾಗಿರುವ 20 ಅಭ್ಯರ್ಥಿಗಳ ಪೈಕಿ 10 ಮಂದಿ ಹೊಸ ಮುಖಗಳು. ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ, ಪಕ್ಷದ ರಾಜ್ಯ ಘಟಕವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದವರು ನಡೆಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಆರೋಪಿಸಿದ್ದಾರೆ.

ಹಾವೇರಿಯಿಂದ ಸ್ಪರ್ಧಿಸಲು ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಈಶ್ವರಪ್ಪ ಅಸಮಾಧಾನಗೊಂಡಿದ್ದಾರೆ. ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಸೂಚಿಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ನಂತರ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸಲಿದ್ದೇವೆ, ನಾವೆಲ್ಲರೂ ಮೋದಿಯವರ ನಾಯಕತ್ವವನ್ನು ನಂಬುತ್ತೇವೆ ಎಂಬುದು ಅವರಿಗೆ ಮನವರಿಕೆಯಾಗುತ್ತದೆ ಎಂದು ನನಗೆ ಭರವಸೆ ಇದೆ ಎಂದು ಅವರು ಹೇಳಿದರು.

20 ಅಭ್ಯರ್ಥಿಗಳ ಪಟ್ಟಿಯನ್ನು ಒಬ್ಬ ವ್ಯಕ್ತಿ ಅಂತಿಮಗೊಳಿಸಿಲ್ಲ. ಇದನ್ನು ಪಕ್ಷದ ನಾಯಕರು ಅಂತಿಮಗೊಳಿಸಿದ್ದಾರೆ. ಯಡಿಯೂರಪ್ಪ ತಮ್ಮ ಅನುಯಾಯಿಗಳಿಗೆ ಒಲವು ತೋರುತ್ತಿದ್ದಾರೆ ಎಂಬ ಆರೋಪಗಳಿಗೆ ವಿಜಯೇಂದ್ರ ಸಮಜಾಯಿಷಿ ನೀಡಿದ್ದಾರೆ. ರಾಜ್ಯದ ಎಲ್ಲಾ 28 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರನ್ನು ದಾವಣಗೆರೆ ಕ್ಷೇತ್ರಕ್ಕೆ ಬಿಜೆಪಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಕೊಪ್ಪಳದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಅವರನ್ನು ಕೈ ಬಿಟ್ಟ ಕಾರಣಕ್ಕೆ ಅವರ ಬೆಂಬಲಿಗರು ಸ್ಥಳೀಯ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಮತ್ತು ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುನೀಲ್ ಕುಮಾರ್ ಮಾತನಾಡಿ, ನಾವು ಗುರುವಾರ ಚರ್ಚೆ ನಡೆಸಿದ್ದೇವೆ ಮತ್ತು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗದ ಮುಖಂಡರೊಂದಿಗೆ ಮಾತನಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

SCROLL FOR NEXT